ಟೋಕಿಯೋ 2020: ತಾಂತ್ರಿಕ ಸಮಸ್ಯೆಯಿಂದ ಶೂಟರ್ ಮನು ಭಾಕರ್‌ಗೆ ಆಘಾತ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶೂಟರ್ ಮನು ಭಾಕರ್‌ಗೆ ಶಾಕ್
* ತಾಂತ್ರಿಕ ಕಾರಣಗಳಿಂದ ಫೈನಲ್ ಪ್ರವೇಶಿಸಲು ಮನು ವಿಫಲ
* ಫೈನಲ್ ಪ್ರವೇಶಿಸಲು 577 ಅಂಕ ಗಳಿಸಬೇಕಿತ್ತು.
ಟೋಕಿಯೋ(ಜು.26): ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಪದಕ ಭರವಸೆ ಮೂಡಿಸಿದ್ದ ಮನು ಭಾಕರ್‌ಗೆ ಆಘಾತ ಎದುರಾಯಿತು. ತಾಂತ್ರಿಕ ಕಾರಣಗಳಿಂದ ಫೈನಲ್ ಪ್ರವೇಶಿಸಲು ಮನು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಬಾಕಿ ಇದ್ದ 55 ನಿಮಿಷಗಳಲ್ಲಿ 44 ಶಾಟ್‌ಗಳನ್ನು ಮನು ಪೂರೈಸಬೇಕಿತ್ತು. ಆ ವೇಳೆ ಅವರ ಪಿಸ್ತೂಲ್‌ನ ಕಾಕಿಂಗ್ ಲಿವರ್‌ನಲ್ಲಿ ಸಮಸ್ಯೆ ಉಂಟಾದ ಕಾರಣ ಅದನ್ನು ಬದಲಿಸಬೇಕಾಯಿತು.
ಹೊಸ ಕಾಕಿಂಗ್ ಲಿವರ್ ಹಾಕಿ, ಪಿಸ್ತೂಲ್ ಸರಿಯಿದೆಯೇ ಎಂದು ಪರೀಕ್ಷಿಸುವ ಹೊತ್ತಿಗೆ 20 ನಿಮಿಷ ವ್ಯರ್ಥವಾಯಿತು. ಮನು 36 ನಿಮಿಷಗಳಲ್ಲಿ 44 ಬಾರಿ ಶೂಟ್ ಮಾಡಬೇಕಾದ ಅನಿವಾರ್ಯತೆ ಸಿಲುಕಿದರೂ ಛಲ ಬಿಡಲಿಲ್ಲ. ಅಂತಿಮವಾಗಿ 575 ಅಂಕಗಳನ್ನು ಗಳಿಸಿದರು. ಕೇವಲ 2 ಅಂಕಗಳ ಅಂತರದಲ್ಲಿ ಮನು ಟೋಕಿಯೋ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಲು ವಿಫಲವಾದರು. ಇದೇ ವಿಭಾಗದಲ್ಲಿ ಯಶಸ್ವಿನಿ ದೇಶ್ವಾಲ್ 574 ಅಂಕ ಗಳಿಸಿದರು. ಮನು ಹಾಗೂ ಯಶಸ್ವಿನಿ ಕ್ರಮವಾಗಿ 12 ಹಾಗೂ 14ನೇ ಸ್ಥಾನ ಪಡೆದರು. ಫೈನಲ್ ಪ್ರವೇಶಿಸಲು 577 ಅಂಕ ಗಳಿಸಬೇಕಿತ್ತು.
ವೆಯ್ಟ್ ಲಿಫ್ಟಿಂಗ್ ಸುಲಭ ಎಂದು ಆಯ್ಕೆ ಮಾಡಿಕೊಂಡೆ; ಸುವರ್ಣನ್ಯೂಸ್ ಜೊತೆ ಪದಕ ಗೆದ್ದ ಮೀರಾ ಮಾತು!
ಮನು ಇನ್ನೂ 2 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಿರಲಿದ್ದಾರೆ. ಮಿಶ್ರ ತಂಡ ವಿಭಾಗದಲ್ಲಿ ಸೌರಭ್ ಹಾಗೂ ಮನು ಪದಕ ಗೆಲ್ಲುವ ನಿರೀಕ್ಷೆ ಇದೆ. ಇದೇ ವೇಳೆ ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ದಿವ್ಯಾನ್ಶ್ ಪನ್ವಾರ್ ಹಾಗೂ ದೀಪಕ್ ಕುಮಾರ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು.