ನವದೆಹಲಿ(ಮಾ.22): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹೊರತಾಗಿಯೂ ಜಪಾನ್‌ 2020ರ ಟೋಕಿಯೋ ಒಲಿಂಪಿಕ್‌ ಕ್ರೀಡಾಕೂಟವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಪಣತೊಟ್ಟಿದೆ. ಆದರೆ ಮತ್ತೊಂದೆಡೆ ಕ್ರೀಡಾಕೂಟವನ್ನು ಮುಂದೂಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಮೇಲೆ ಒತ್ತಡ ಹೆಚ್ಚುತ್ತಿದೆ.

ವಿಶೇಷ ವಿಮಾನದಲ್ಲಿ ಜಪಾನ್‌ ತಲುಪಿದ ಒಲಿಂಪಿಕ್‌ ಜ್ಯೋತಿ

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಗಳು ಒಂದೊಂದಾಗಿ ಕ್ರೀಡಾಕೂಟವನ್ನು ಮುಂದೂಡಬೇಕು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಬಲಿಷ್ಠ ಅಮೆರಿಕದಲ್ಲೂ ಒಲಿಂಪಿಕ್ಸ್‌ ಮುಂದೂಡುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮೆರಿಕ ಒಲಿಂಪಿಕ್ಸ್‌ ಸಂಸ್ಥೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರೆ, ಅಮೆರಿಕ ಈಜು ಫೆಡರೇಷನ್‌ ಕ್ರೀಡಾಕೂಟವನ್ನು ಕಡ್ಡಾಯವಾಗಿ ಮುಂದೂಡಬೇಕು ಎಂದು ಆಗ್ರಹಿಸಿದೆ. ಈಜು ಫೆಡರೇಷನ್‌ನ ಮುಖ್ಯಸ್ಥ ಟಿಮ್‌ ಹಿನ್ಚೇ, ‘ಅಮೆರಿಕ ಒಲಿಂಪಿಕ್‌ ಸಂಸ್ಥೆ ಪ್ರಬಲ ಸಂಸ್ಥೆಗಳಲ್ಲಿ ಒಂದಾಗಿದ್ದು, ತನ್ನ ಕ್ರೀಡಾಪಟುಗಳ ಪರ ದನಿ ಎತ್ತಬೇಕಿದೆ. ಈಜುಪಟುಗಳಿಗೆ ಅಭ್ಯಾಸ ನಡೆಸಲು ವ್ಯವಸ್ಥೆ ಇಲ್ಲದಂತಾಗಿದೆ. ಊಹಿಸಲಾಗದ ಮಟ್ಟಿಗೆ ಸಮಸ್ಯೆಯಾಗುತ್ತಿದೆ. ಒಲಿಂಪಿಕ್ಸ್‌ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಈಜುಪಟುಗಳು ಆತಂಕದಲ್ಲಿದ್ದಾರೆ. ದೇಶದ ಇತರ ಕ್ರೀಡಾಪಟುಗಳ ಪರಿಸ್ಥಿತಿಯೂ ವಿಭಿನ್ನವಾಗಿಲ್ಲ. ಹೀಗಾಗಿ, ಕ್ರೀಡಾಕೂಟವನ್ನು ಮುಂದೂಡಬೇಕು’ ಎಂದಿದ್ದಾರೆ.

ಒಲಿಂಪಿಕ್ಸ್‌ ರದ್ದಾಗಲ್ಲ: ಜಪಾನ್‌ ಪ್ರಧಾನಿ ಸ್ಪಷ್ಟನೆ

ಚಿನ್ನದ ಮೀನು ಎಂದೇ ಕರೆಸಿಕೊಳ್ಳುವ ದಿಗ್ಗಜ ಈಜುಪಟು ಮೈಕಲ್‌ ಫೆಲ್ಫ್ಸ್ ಅವರ ಕೋಚ್‌ ಬಾಬ್‌ ಬೊವ್ಮನ್‌, ಹಿನ್ಚೇಗೆ ಬೆಂಬಲ ಸೂಚಿಸಿದ್ದು, ‘ಸದ್ಯದ ಪರಿಸ್ಥಿತಿಯಲ್ಲೇ ಕ್ರೀಡಾಕೂಟ ನಡೆಸಿದರೆ ಯಾರಿಗೂ ಉತ್ತಮ ಪ್ರದರ್ಶನ ತೋರಲು ಸಾಧ್ಯವಿಲ್ಲ. ಅಭ್ಯಾಸ ನಡೆಸಲು ಈಜುಪಟುಗಳಿಗೆ ಅವಕಾಶವೇ ಸಿಗುತ್ತಿಲ್ಲ’ ಎಂದಿದ್ದಾರೆ. ಅಮೆರಿಕದ ಮಾಜಿ ಒಲಿಂಪಿಕ್‌ ಓಟಗಾರ ಕಾರಾ ಗೌಷರ್‌ ಕ್ರೀಡಾಪಟುಗಳ ಸುರಕ್ಷತೆಗಿಂತ ಹಣಕಾಸಿನ ಬಗ್ಗೆಯಷ್ಟೇ ಒಲಿಂಪಿಕ್‌ ಮುಖ್ಯಸ್ಥರು ಚಿಂತಿಸುತ್ತಿರುವುದು ಖಂಡಿನೀಯ ಎಂದಿದ್ದಾರೆ.

ಕೊರೋನಾ: ಟೋಕಿಯೋ ಒಲಿಂಪಿಕ್ಸ್‌ ಮುಂದೂಡಿಕೆ?

ಫ್ರಾನ್ಸ್‌ನಿಂದಲೂ ಬೆಂಬಲ: ಅಮೆರಿಕದ ಈಜು ಫೆಡರೇಷನ್‌ ಒಲಿಂಪಿಕ್ಸ್‌ ಮುಂದೂಡುವಂತೆ ಆಗ್ರಹಿಸಿದ ಬೆನ್ನಲ್ಲೇ ಫ್ರಾನ್ಸ್‌ ಈಜು ಫೆಡರೇಷನ್‌ ಸಹ ಇದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ಸರಿಯಾಗಿ ಆಯೋಜಿಸಲು ಸಾಧ್ಯವಿಲ್ಲ ಎಂದು ಫೆಡರೇಷನ್‌ ಅಧಿಕಾರಿಗಳು ತಿಳಿಸಿದ್ದಾರೆ. ಕ್ರೀಡಾಕೂಟವನ್ನು ಮುಂದೂಡಲು ಸಾಧ್ಯವೇ ಎನ್ನುವ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಪರಿಶೀಲನೆ ನಡೆಸಬೇಕು ಎಂದಿದೆ.

ನಾರ್ವೆ, ಬ್ರಿಟನ್‌ ಕೋರಿಕೆ: ಶುಕ್ರವಾರ ನಾರ್ವೆ ಒಲಿಂಪಿಕ್‌ ಸಂಸ್ಥೆ ಸಹ ಕ್ರೀಡಾಕೂಟವನ್ನು ಮುಂದೂಡುವಂತೆ ಕೋರಿಕೆ ಸಲ್ಲಿಸಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಒಲಿಂಪಿಕ್ಸ್‌ ನಡೆಸಬಾರದು ಎಂದು ಕೇಳಿಕೊಂಡಿದೆ. ಐಒಸಿಗೆ ಪತ್ರ ಬರೆದಿರುವ ನಾರ್ವೆ ಒಲಿಂಪಿಕ್‌ ಸಂಸ್ಥೆ, ‘ತನ್ನ ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಗೆ ಕಳುಹಿಸಲು ಆತಂಕವಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸಮಯವಿದು’ ಎಂದು ಉಲ್ಲೇಖಿಸಿದೆ. ನಾರ್ವೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದು, ಅಥ್ಲೀಟ್‌ಗಳಿಗೆ ಅಭ್ಯಾಸ ನಡೆಸಲು ಕಷ್ಟವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳು ದನಿಗೂಡಿಸುವ ಸಾಧ್ಯತೆ ಇದೆ. ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ತಾರಾ ಕ್ರೀಡಾಪಟುಗಳು ಒಲಿಂಪಿಕ್ಸ್‌ ಮುಂದೂಡುವಂತೆ ಆಗ್ರಹಿಸಿದ್ದಾರೆ. ಸಾಮಾಜಿಕ ತಾಣಗಳಲ್ಲೂ ಚರ್ಚೆ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ದಿನೇ ದಿನೇ ಒತ್ತಡಕ್ಕೆ ಸಿಲುಕಿದೆ.