* ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಅಥ್ಲೀಟ್‌ಗಳಿಗೆ ಬಂಪರ್ ಬಹುಮಾನ ಘೋಷಿಸಿದ ಸಿಎಂ ಯಡಿಯೂರಪ್ಪ* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಮೂವರು ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. * ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಅಥ್ಲೀಟ್‌ಗೆ ಸಿಗಲಿದೆ 5 ಕೋಟಿ ರುಪಾಯಿ ಬಹುಮಾನ 

ಬೆಂಗಳೂರು(ಜು.15): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಪಗಳ ಪೈಕಿ ಚಿನ್ನದ ಪದಕ ಗೆದ್ದವರಿಗೆ ಐದು ಕೋಟಿ ರುಪಾಯಿ, ಬೆಳ್ಳಿ ಪದಕ ಗೆದ್ದವರಿಗೆ ಮೂರು ಕೋಟಿ ರುಪಾಯಿ ಮತ್ತು ಕಂಚಿನ ಪದಕ ಗೆದ್ದವರಿಗೆ ಎರಡು ಕೋಟಿ ರುಪಾಯಿ ಕೋಟಿ ನೀಡಿ ಪುರಸ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರುಪಾಯಿ ಪ್ರೋತ್ಸಾಹ ಧನ ವಿತರಿಸಲಾಯಿತು. ಕ್ರೀಡಾಪಟು ಶ್ರೀಹರಿ ನಟರಾಜ್‌ ಅವರಿಗೆ ಪ್ರೋತ್ಸಾಹ ಧನ ಚೆಕ್‌ ವಿತರಿಸಿದರು. ಅಧಿತಿ ಅಶೋಕ್‌, ಫೌವಾದ್‌ ಮಿರ್ಜಾಗೆ ಅವರ ಪರವಾಗಿ ಅವರ ಪೋಷಕರಿಗೆ ತಲಾ 10 ಲಕ್ಷ ರು. ಚೆಕ್‌ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಹಸ್ತಾಂತರಿಸಿ, ಶುಭಕೋರಿದರು.

Scroll to load tweet…

ಬಳಿಕ ಮಾತನಾಡಿದ ಅವರು, ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ 120 ಕ್ರೀಡಾಪಟುಗಳ ಪೈಕಿ ರಾಜ್ಯದ ಮೂವರು ಸೇರಿದ್ದಾರೆ ಎಂಬುದು ಹೆಮ್ಮೆ ಪಡುವ ವಿಚಾರ. ರಾಜ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ವೃದ್ಧಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಂಡ್ಯ ನಗರದಲ್ಲಿರುವ ಕ್ರೀಡಾಂಗಣವನ್ನು 10 ಕೋಟಿ ರುಪಾಯಿ ವೆಚ್ಚದಲ್ಲಿ ಉನ್ನತೀಕರಿಸಿ ಅತ್ಯುತ್ತಮ ದರ್ಜೆಯ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದರು.

ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

ದೇವನಹಳ್ಳಿಯಲ್ಲಿ ಫುಟ್‌ಬಾಲ್, ಹಾಕಿ, ಶೂಟಿಂಗ್‌, ಈಜು, ಟೆನ್ನಿಸ್‌ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಿ ಮಿಷನ್‌ ಒಲಿಂಪಿಕ್ಸ್‌ಗೆ ಸಿದ್ಧಗೊಳಿಸಲಾಗುವುದು. ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಎರಡು ಕೋಟಿ ರು.ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಸಚಿವ ನಾರಾಯಣ ಗೌಡ, ಈಜು ಸ್ಪರ್ಧೆ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಭಾಗವಹಿಸುತ್ತಿದೆ. ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಈ ಪೈಕಿ ಒಬ್ಬರು ಕ್ರೀಡಾಪಟು ಕರ್ನಾಟಕದವರು ಎನ್ನುವುದು ನಮಗೆ ಹೆಮ್ಮೆ ವಿಚಾರ. ಒಲಂಪಿಕ್ಸ್‌ಗೆ ಆಯ್ಕೆಯಾಗಿರುವ ಮೂವರೂ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸಿದರು.

ಇದೇ ವೇಳೆ ಭಾರತ ತಂಡದ ಜೆರ್ಸಿಯನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಕರ್ನಾಟಕ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಗೋವಿಂದರಾಜ್‌, ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.

ಒಲಿಂಪಿಕ್ಸ್‌ಗೆ ರಾಜ್ಯ ಕ್ರೀಡಾಪಟುಗಳು

ಅದಿತಿ ಅಶೋಕ್‌-ಗಾಲ್ಫ್‌

ಶ್ರೀಹರಿ ನಟರಾಜ್‌- ಈಜು

ಫೌಹಾದ್‌ ಮಿರ್ಜಾ - ಈಕ್ವೆಸ್ಟ್ರಿಯನ್‌

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.