ಟೋಕಿಯೋ ಒಲಿಂಪಿಕ್ಸ್ ವೀಕ್ಷಿಸಲು ಹೋಗೋ ಅಭಿಮಾನಿಗಳು ಕೂಗುವಂತಿಲ್ಲ..!
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವವರಿಗೆ ಆಯೋಜಕರು ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಎಲ್ಲರೂ ಆ ನಿಯಮಗಳನ್ನು ಅನುಸರಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಈ ಕುರಿತಾದ ವಿಸ್ತೃತ ವರದಿ ಇಲ್ಲಿದೆ ನೋಡಿ.
ಟೋಕಿಯೋ(ಫೆ.04): ಕೊರೋನಾ ಆತಂಕದ ನಡುವೆಯೂ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಭರ್ಜರಿ ಸಿದ್ಧತೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹಾಗೂ ಜಪಾನ್ ಸರ್ಕಾರ, ಬುಧವಾರ ಪ್ರೇಕ್ಷಕರು ಹಾಗೂ ಕ್ರೀಡಾಪಟುಗಳು ಹೇಗಿರಬೇಕು ಎನ್ನುವ ಪ್ರಾಥಮಿಕ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಆಯೋಜಕರು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಜಪಾನ್‌ಗೆ ಬಂದಿಳಿದಾಗಿನಿಂದ ಹೊರಡುವ ವರೆಗೂ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಇದೇ ವೇಳೆ ಕ್ರೀಡಾಂಗಣಗಳಿಗೆ ಎಷ್ಟು ಪ್ರಮಾಣದಲ್ಲಿ ಪ್ರೇಕ್ಷಕರನ್ನು ಬಿಡಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲವಾದರೂ, ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಅಭಿಮಾನಿಗಳು ಕೂಗುವಂತಿಲ್ಲ, ಹಾಡು ಹೇಳುವಂತಿಲ್ಲ ಎಂದು ಸೂಚಿಸಲಾಗಿದೆ.
ಒಲಿಂಪಿಕ್ಸ್ ರದ್ದು ಮಾಡಲ್ಲ: ಜಪಾನ್, ಐಒಸಿ ಸ್ಪಷ್ಟನೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 15,400 ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇಷ್ಟೂ ಜನರಿಗೆ ಬಯೋಬಬಲ್ ನಿರ್ಮಾಣ ಮಾಡುವುದು ಆಯೋಜಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ, ಜಪಾನ್‌ಗೆ ತೆರಳುವ ಕ್ರೀಡಾಪಟುಗಳು ಕೊರೋನಾ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಇನ್ನು ಕ್ರೀಡಾಕೂಟದ ವೇಳೆ ಕ್ರೀಡಾಪಟುಗಳು ಆಹಾರ ಸೇವಿಸುವಾಗ, ನಿದ್ದೆ ಮಾಡುವಾಗ ಬಿಟ್ಟು ಉಳಿದ ಸಮಯಗಳಲ್ಲಿ ಮಾಸ್ಕ್ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.