ಒಲಿಂಪಿಕ್ಸ್ ರದ್ದು ಮಾಡಲ್ಲ: ಜಪಾನ್, ಐಒಸಿ ಸ್ಪಷ್ಟನೆ
ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಈ ಬಾರಿಯೂ ಮುಂದೂಡಲ್ಪಡಲಿದೆ ಎನ್ನುವ ಗಾಳಿ ಸುದ್ದಿಗೆ ಒಲಿಂಪಿಕ್ ಆಯೋಜನ ಸಮಿತಿ ಹಾಗೂ ಜಪಾನ್ ಸರ್ಕಾರ ತೆರೆ ಎಳೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಜ.23): ಕೋವಿಡ್ ಕಾರಣದಿಂದಾಗಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕ್ರೀಡಾಕೂಟ ಪೂರ್ವನಿಗದಿಯಂತೆ ಅಯೋಜಿಸುತ್ತೇವೆ ಎಂದು ಜಪಾನ್ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶುಕ್ರವಾರ ಸ್ಪಷ್ಟಪಡಿಸಿವೆ.
ಕೋವಿಡ್ 3ನೇ ಅಲೆಯಿಂದಾಗಿ ಜಪಾನ್‌ನ ಬಹುತೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಇದ್ದರೂ, ಟೋಕಿಯೋ ಗೇಮ್ಸ್‌ನ ಆಯೋಜಕರು ಜುಲೈ 23ರಿಂದಲೇ ಕ್ರೀಡಾಕೂಟ ನಡೆಸಲು ಶ್ರಮ ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಏನು ಬೇಕಾದರೂ ಆಗಬಹುದು: ಜಪಾನ್ ಸಚಿವ
ಇತ್ತೀಚೆಗೆ ಸಮೀಕ್ಷೆವೊಂದರ ವರದಿ ಪ್ರಕಾರ ಶೇ.80ಕ್ಕಿಂತ ಹೆಚ್ಚು ಜಪಾನಿಯರು ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸಬೇಕು ಎಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಒಸಿ, ಆ ರೀತಿ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿದೆ. ಜೊತೆಗೆ ಬ್ರಿಟನ್‌ನ ಪತ್ರಿಕೆಯೊಂದು ಒಲಿಂಪಿಕ್ಸ್ ರದ್ದುಗೊಳಿಸಲು ಜಪಾನ್ ಸರ್ಕಾರ ಆಂತರಿಕ ಸಭೆಯಲ್ಲಿ ನಿರ್ಧರಿಸಿದೆ ಎಂದು ವರದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ವಕ್ತಾರ, ಆ ವರದಿ ‘ಶುದ್ಧ ಸುಳ್ಳು’ ಎಂದಿದ್ದಾರೆ.