* ಕೊರೋನಾ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ* ಒಲಿಂಪಿಕ್ಸ್‌ ಆರಂಭಕ್ಕೆ 3 ದಿನಗಳಿರುವ ಕ್ರೀಡಾಗ್ರಾಮದಲ್ಲಿ ಕೋವಿಡ್ ಪತ್ತೆ* ಜೆಕ್‌ ಗಣರಾಜ್ಯದ ವಾಲಿಬಾಲ್ ಆಟಗಾರನಿಗೆ ಕೋವಿಡ್ ದೃಢ

ಟೋಕಿಯೋ(ಜು.20): ಒಲಿಂಪಿಕ್ಸ್‌ ಆರಂಭಕ್ಕೆ ಕೇವಲ 3 ದಿನ ಬಾಕಿ ಇದ್ದರೂ, ಕೊರೋನಾತಂಕ ಮಾತ್ರ ಕಡಿಮೆಯಾಗುತ್ತಿಲ್ಲ. ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಿದ್ದ ಚೆಕ್‌ ಗಣರಾಜ್ಯದ ವಾಲಿಬಾಲ್‌ ಆಟಗಾರನಿಗೆ ಸೋಂಕು ದೃಢಪಟ್ಟಿದ್ದು ಆತಂಕ ಹೆಚ್ಚಾಗಿದೆ. 

ಚೆಕ್‌ ಗಣರಾಜ್ಯದ ವಾಲಿಬಾಲ್‌ ಆಟಗಾರ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಹೀಗಿದ್ದೂ ಬೀಚ್ ವಾಲಿಬಾಲ್ ಆಟಗಾರನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎರಡನೇ ಚೆಕ್‌ ಗಣರಾಜ್ಯದ ವ್ಯಕ್ತಿಗೆ ಕೋವಿಡ್ ಪತ್ತೆಯಾದಂತೆ ಆಗಿದೆ. ಈ ಮೊದಲು ಶನಿವಾರ ಜೆಕ್ ಗಣರಾಜ್ಯದ ಸಿಬ್ಬಂದಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.

ಭಾನುವಾರವಷ್ಟೇ ಕ್ರೀಡಾ ಗ್ರಾಮದಲ್ಲಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಫುಟ್ಬಾಲ್‌ ಆಟಗಾರರಿಗೆ ಸೋಂಕು ತಗುಲಿತ್ತು. ಇದೇ ವೇಳೆ ಅಮೆರಿಕದ ಜಿಮ್ನಾಸ್ಟಿಕ್ಸ್‌ ತಂಡದಲ್ಲಿರುವ ಮೀಸಲು ಅಥ್ಲೀಟ್‌ ಸಹ ಸೋಂಕಿಗೆ ತುತ್ತಾಗಿದ್ದಾರೆ. ಈ ಅಥ್ಲೀಟ್‌ ಟೋಕಿಯೋದ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಅಮೆರಿಕ ಜಿಮ್ನಾಸ್ಟಿಕ್ ಪಟುವಿಗೆ ಕೋವಿಡ್ ಪಾಸಿಟಿವ್

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಜುಲೈ 01ರಿಂದೀಚೆಗೆ ಒಟ್ಟು 58 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಂತೆ ಆಗಿದೆ. ಜುಲೈ 01ರಿಂದ ಇಲ್ಲಿಯವರೆಗೆ ಒಟ್ಟು 22 ಸಾವಿರ ಮಂದಿ ಜಪಾನ್‌ಗೆ ಬಂದಿಳಿದಿದ್ದಾರೆ. ಈ ಪೈಕಿ 4,000 ಮಂದಿ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 11,000 ಅಥ್ಲೀಟ್‌ಗಳು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.