ಟೋಕಿಯೋ ಒಲಿಂಪಿಕ್ಸ್ ಏನು ಬೇಕಾದರೂ ಆಗಬಹುದು: ಜಪಾನ್ ಸಚಿವ
2021ಕ್ಕೆ ಮುಂದೂಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ಈ ವರ್ಷ ಕೂಡಾ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಜಪಾನಿನ ಸಚಿವರೊಬ್ಬರ ಹೇಳಿಕೆ ಕ್ರೀಡಾಕೂಟ ಆಯೋಜನೆಯ ಬಗ್ಗೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಜ.15): ಕೊರೋನಾ ವೈರಸ್ ಭೀತಿಯಿಂದ 2021ಕ್ಕೆ ಮುಂದೂಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಈ ಬಾರಿ ಏನು ಬೇಕಾದರೂ ಆಗಬಹುದು ಎಂದು ಜಪಾನಿನ ಕ್ಯಾಬಿನೇಟ್ ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಬೇರೆ ಬೇರೆ ದೇಶಗಳು ಇನ್ನೂ ಸಹ ಕೊರೋನಾ ಎದುರು ಹೋರಾಡುತ್ತಿವೆ, ಹೀಗಿರುವಾಗಲೇ ಜಪಾನಿನ ಆಡಳಿತಾತ್ಮಕ ಮತ್ತು ಕಾನೂನು ತಿದ್ದುಪಡಿ ಸಚಿವ ತಾರೋ ಕೊನೊ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ತಾರೋ ಕೆನೋ ಟೋಕಿಯೋ ಒಲಿಂಪಿಕ್ಸ್ ರದ್ದಾಗಲಿದೆ ಎಂದು ಖಡಾಖಂಡಿತವಾಗಿ ಹೇಳಿಲ್ಲ. ಆದರೆ ಜಪಾನ್ ಕೂಡಾ ಕೊರೋನಾ ಆತಂಕ ಎದುರಿಸುತ್ತಿದೆ. ಈಗಾಗಲೇ ಗ್ರೇಟರ್ ಟೋಕಿಯೋ ಮತ್ತೆ ಕೆಲವು ಪ್ರಾಂತ್ಯಗಳಲ್ಲಿ ಫೆಬ್ರವರಿ 07ರವರಗೆ ತುರ್ತು ಪರಿಸ್ಥಿತಿ ಹೇರಲಾಗಿದೆ.
ಸದ್ಯದ ಕೊರೋನಾ ಪರಿಸ್ಥಿತಿಯನ್ನು ಗಮನಿಸಿದರೆ ಏನು ಬೇಕಾದರೂ ಆಗಬಹುದು ಎಂದು ಮಾಜಿ ವಿದೇಶಾಂಗ ಹಾಗೂ ರಕ್ಷಣಾ ಸಚಿವ ಕೊನೊ ಎಂದು ಹೇಳಿದ್ದಾರೆ. ಒಲಿಂಪಿಕ್ ಆಯೋಜನ ಸಮಿತಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಬ್ಯಾಕ್ ಅಪ್ ಪ್ಲಾನ್ ಮಾಡಿಕೊಳ್ಳುವ ಯೋಚನೆ ಮಾಡಿಕೊಳ್ಳಬೇಕು. ಜಪಾನ್ ಸರ್ಕಾರ ಒಲಿಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ಆಯೋಜನೆಗೆ ಎಲ್ಲ ನೆರವು ಹಾಗೂ ಸಹಕಾರವನ್ನು ನೀಡುತ್ತಿದೆ ಎಂದು ಕೊನೊ ಹೇಳಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಬ್ರೇಕ್ ಡ್ಯಾನ್ಸ್ ಸೇರ್ಪಡೆ..!
ಜಪಾನಿನಲ್ಲಿ ಈ ವರ್ಷ ಒಲಿಂಪಿಕ್ಸ್ ಆಯೋಜಿಸಬೇಕೇ ಎನ್ನುವ ಕುರಿತಂತೆ ಸಾರ್ವಜನಿಕವಾಗಿ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಪೈಕಿ ಶೇ.80ರಷ್ಟು ಮಂದಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಪಡಿಸಿ ಇಲ್ಲವೇ ಮತ್ತೊಮ್ಮೆ ಮುಂದೂಡಿ ಎಂದು ಜಪಾನಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಸಾಗಿದರೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ಜಪಾನಿನ ಟೋಕಿಯೋ ನಗರದಲ್ಲಿ ನಡೆಯಲಿದೆ.