#Cheer4India ಅಭಿಯಾನದಲ್ಲಿ ಪಾಲ್ಗೊಳ್ಳಲು ಯುವಕರಿಗೆ ಡಿಸಿಎಂ ಅಶ್ವತ್ಥನಾರಾಯಣ್ ಕರೆ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಕ್ಷಣಗಣನೆ ಆರಂಭ
* ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಅರಂಭ
* ಚಿಯರ್ 4 ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಯುವಕರಿಗೆ ಡಿಸಿಎಂ ಡಾ. ಅಶ್ವತ್ಥನಾರಾಯಣ ಕರೆ
ಬೆಂಗಳೂರು(ಜು.21): ಮುಂಬರುವ ʼಟೋಕಿಯೋ ಒಲಿಂಪಿಕ್ಸ್-2020ʼ ಕ್ರೀಡಾಕೂಟದಲ್ಲಿನ ಭಾರತೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ “ಚೀರ್ 4 ಇಂಡಿಯಾ” ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕರೆ ನೀಡಿದ್ದಾರೆ
ಜುಲೈ 23ರಿಂದ ಆರಂಭವಾಗಲಿರುವ ʼಟೋಕಿಯೋ ಒಲಿಂಪಿಕ್ಸ್ʼ ಕ್ರೀಡಾಕೂಟದಲ್ಲಿ ಭಾರತೀಯ ಸ್ಫರ್ಧಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭಾರತೀಯ ದೈಹಿಕ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವೆಬಿನಾರ್‌ನಲ್ಲಿ ಡಿಸಿಎಂ ಭಾಗವಹಿಸಿ ಮಾತನಾಡಿದರು. 15 ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಹಬ್ಬದಲ್ಲಿ ನಮ್ಮ ದೇಶದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಈ ಅಭಿಯಾನದ ಭಾಗವಾಗಿ ತಮ್ಮ ಸಾಮಾಜಿಕ ತಾಣದ ಖಾತೆಗಳಲ್ಲಿ ನಮ್ಮ ಕ್ರೀಡಾಪಟುಗಳಿಗೆ ಚೈತನ್ಯ, ಪ್ರೋತ್ಸಾಹ ತುಂಬುವಂಥ ಬರಹಗಳನ್ನು, ಪೋಸ್ಟ್‌ಗಳನ್ನು ಹಾಕುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಡಿಸಿಎಂ ಹೇಳಿದರು. ಈ ವೆಬಿನಾರ್‌ನಲ್ಲಿ ರಾಜ್ಯದ ಯುವಜನ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ, ಮಾಜಿ ಒಲಿಂಪಿಕ್ ಕ್ರೀಡಾಪಟು ಪ್ರಮೀಳಾ ಅಯ್ಯಪ್ಪ, ಅರ್ಜುನ ಪ್ರಶಸ್ತಿ ವಿಜೇತ ಜೂಡ್ ಫೆಲಿಕ್ಸ್, ಭಾರತದ ದೈಹಿಕ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪಿಯೂಷ್ ಜೈನ್ ಮುಂತಾದವರು ಭಾಗವಹಿಸಿದ್ದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ ಭಾರತದಿಂದ ಈ ಬಾರಿ 127 ಅಥ್ಲೀಟ್‌ಗಳು 18 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲುವ ಬರವಸೆ ಮೂಡಿಸಿದೆ.