ಟೋಕಿಯೋ 2020: ದೀಪಕ್, ರವಿ ಕುಮಾರ್ ಸೆಮೀಸ್‌ಗೆ ಲಗ್ಗೆ, ಒಲಿಂಪಿಕ್ಸ್ ಪದಕಕ್ಕೆ ಇನ್ನೊಂದೇ ಹೆಜ್ಜೆ
* ಭಾರತೀಯ ಕುಸ್ತಿ ಅಭಿಮಾನಿಗಳಿಗೆ ಗುಡ್ ನ್ಯೂಸ್
* ಸೆಮಿಫೈನಲ್‌ಗೆ ಲಗ್ಗೆಯಿಟ್ಟ ದೀಪಕ್ ಪುನಿಯಾ, ರವಿ ಕುಮಾರ್ ದಹಿಯಾ
* ಇನ್ನೊಂದು ಪಂದ್ಯ ಗೆದ್ದರೆ ಭಾರತಕ್ಕೆ ಪದಕ ಖಚಿತ
ಟೋಕಿಯೋ(ಆ.04): ಭಾರತೀಯ ಅಭಿಮಾನಿಗಳ ಪಾಲಿಗೆ ಕುಸ್ತಿ ವಿಭಾಗದಿಂದ ಸಿಹಿಸುದ್ದಿ ಹೊರಬಿದ್ದಿದ್ದು, ಭಾರತದ ತಾರಾ ಕುಸ್ತಿಪಟುಗಳಾದ ದೀಪಕ್ ಪುನಿಯಾ ಹಾಗೂ ರವಿ ಕುಮಾರ್ ದಹಿಯಾ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಇನ್ನೊಂದು ಪಂದ್ಯ ಜಯಿಸಿದರೆ ಒಲಿಂಪಿಕ್ಸ್ ಪದಕಕ್ಕೆ ಕೊರಳೊಡ್ದಲಿದ್ದಾರೆ.
ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾ ಆಟಗಾರನ ಎದುರು ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಪ್ರವೇಶಿಸಿದ್ದ ರವಿ ಕುಮಾರ್ ದಹಿಯಾ, ಬಲ್ಗೇರಿಯಾದ ಜಾರ್ಜಿ ವೆಂಗೆಲ್ವೊ ಎದುರು ಮತ್ತೊಮ್ಮೆ ಟೆಕ್ನಿಕಲ್ ಸೂಪಿರಿಯಾರಿಟಿ ಮೆರೆಯುವ ಮೂಲಕ 14-4 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆರಂಭದಲ್ಲಿ ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ರವಿ ಕುಮಾರ್ ಮೊದಲ ಸುತ್ತಿನಲ್ಲೇ 4-0 ಮುನ್ನಡೆ ಕಾಯ್ದುಕೊಂಡಿದ್ದರು, ಇದಾದ ಬಳಿಕವೂ ಪ್ರಾಬಲ್ಯ ಮೆರೆದ ರವಿ 14-4 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಸೆಮೀಸ್ ಪ್ರವೇಶಿಸಿದ್ದಾರೆ.
ಟೋಕಿಯೋ 2020: ಕುಸ್ತಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ!
ಇನ್ನು ಪುರುಷರ 86 ಕೆ.ಜಿ. ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಕುಸ್ತಿಪಟು ದೀಪಕ್ ಪುನಿಯಾ, ಚೀನಾದ ಲಿನ್ ಜುಸೇನ್ ಎದುರು 6-3 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕೊನೆಯ ಕ್ಷಣದವರೆಗೂ 3-3 ಅಂಕಗಳ ಸಮಬಲ ಸಾಧಿಸಿದ್ದ ಉಭಯ ಆಟಗಾರರ ನಡುವೆ ಸಾಕಷ್ಟು ಪೈಪೋಟಿ ಕಂಡು ಬಂದಿತು. ಆದರೆ ಕೊನೆಯ ಕೆಲ ಸೆಕೆಂಡ್‌ಗಳು ಬಾಕಿ ಇರುವಾಗ ತನ್ನೆಲ್ಲಾ ಅನುಭವಗಳನ್ನು ಬಳಸಿಕೊಂಡ ದೀಪಕ್ 6-3 ಅಂಕಗಳ ಮುನ್ನಡೆ ಸಾಧಿಸುವುದರೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಸೆಮಿಫೈನಲ್ ಪಂದ್ಯಗಳು ಇಂದು ಮಧ್ಯಾಹ್ನ 2.45ರಿಂದ ಆರಂಭವಾಗಲಿವೆ. ಸೆಮಿಫೈನಲ್‌ನಲ್ಲಿ ದೀಪಕ್ ಅಮೆರಿಕದ ಡೇವಿಡ್ ಮೋರಿಸ್ ಅವರನ್ನು ಎದುರಿಸಲಿದ್ದಾರೆ.