ಟೋಕಿಯೋ 2020: ಕುಸ್ತಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ!
* ಕುಸ್ತಿಯಲ್ಲಿ ಶುಭಾರಂಭ ಮಾಡಿದ ಭಾರತದ ಕುಸ್ತಿಪಟುಗಳು
* ರವಿ ದಹಿಯಾ, ದೀಪಕ್ ಪುನಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
* ಅಂಶ್ಯು ಮಲಿಕ್‌ಗೆ ಮೊದಲ ಸುತ್ತಿನಲ್ಲೇ ಸೋಲು
ಟೋಕಿಯೋ(ಆ.04): ಭಾರತದ ಪುರುಷ ಕುಸ್ತಿಪಟುಗಳಾದ ರವಿ ದಹಿಯಾ, ದೀಪಕ್ ಪುನಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆ ಮೂಡಿಸಿದ್ದರೆ, ಮಹಿಳಾ ಕುಸ್ತಿಪಟು ಅಂಶ್ಯು ಮಲಿಕ್ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದ್ದಾರೆ.
ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಸ್ಪರ್ಧೆಯಲ್ಲಿ ಇನ್ನೂ 10 ಸೆಕೆಂಡ್‌ಗಳು ಬಾಕಿ ಇರುವಾಗಲೇ ರವಿ ದಹಿಯಾ ಟೆಕ್ನಿಕಲ್ ಸೂಪಿರಿಯಾರಿಟಿ ಸಾಧಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಮೊದಲಿಗೆ ಕೊಲಂಬಿಯಾದ ಆಟಗಾರನ ಕಾಲನ್ನ ಬಿಗಿಯಾಗಿ ಹಿಡಿಯುವ ಮೂಲಕ ಎರಡು ಅಂಕ ಸಂಪಾದಿಸಿದರು. ಇದಾದ ಬಳಿಕ ಕೊಲಂಬಿಯಾದ 2 ಅಂಕ ಸಂಪಾದಿಸಿದರು. ಇದಾದ ಬಳಿಕ ಮ್ಯಾಟಿಂದ ಹೊರದಬ್ಬುವ ಮೂಲಕ ರವಿ ಮತ್ತೊಂದು ಅಂಕ ಗಳಿಸಿದರು. ಇದರೊಂದಿಗೆ ಮೊದಲ 3 ನಿಮಿಷದಲ್ಲಿ ರವಿ 3-2 ಅಂಕಗಳ ಮುನ್ನಡೆ ಸಾಧಿಸಿದರು. ಇದಾದ ಬಳಿಕ ಎರಡನೇ ಹಂತದಲ್ಲಿ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ತೋರಿದ ರವಿ ದಹಿಯಾ ಸತತ 11 ಅಂಕಗಳನ್ನು ಗಳಿಸುವ ಮೂಲಕ ಅನಾಯಾಸವಾಗಿ ಗೆಲುವಿನ ನಗೆ ಬೀರಿದರು.
ಟೆಕ್ನಿಕಲ್ ಸೂಪಿರಿಯಾರಿಟಿ ಅಂದರೆ ಎದುರಾಳಿ ಸ್ಪರ್ಧಿಗಿಂತ 10 ಮುನ್ನಡೆ ಸಾಧಿಸಿದ ಆಟಗಾರನನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಅದರಂತೆ ದಹಿಯಾ 13-2 ಅಂಕಗಳನ್ನು ಗಳಿಸುತ್ತಿದ್ದಂತೆ ಭಾರತದ ಕುಸ್ತಿ ಪಟುವನ್ನು ತೀರ್ಪುಗಾರರು ಜಯಶಾಲಿ ಎಂದು ಘೋಷಿಸಲಾಯಿತು.
ದೀಪಕ್ ಪುನಿಯಾ ಜಯಭೇರಿ:
ಇನ್ನು ಪುರುಷರ 86 ಕೆ.ಜಿ. ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಕುಸ್ತಿಪಟು ದೀಪಕ್ ಪುನಿಯಾ ಕೂಡಾ ಟೆಕ್ನಿಕಲ್ ಸೂಪಿರಿಯಾರಿಟಿ ಆಧಾರದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ವಿಶ್ವದ 8ನೇ ಶ್ರೇಯಾಂಕಿತ ದೀಪಕ್ ಪುನಿಯಾ, ನೈಜೀರಿಯಾದ ಅಗಿಮೋರ್ ಎದುರು 12-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.
ಆಫ್ರಿಕಾ ಮೂಲದ ಪ್ರಬಲ ಕುಸ್ತಿಪಟು ಎನಿಸಿದ್ದ ಅಗಿಮೋರ್ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ದೀಪಕ್ ಅನಾಯಾಸವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ.
ಇದೀಗ ದೀಪಕ್ ಪುನಿಯಾ ಸೆಮಿಫೈನಲ್‌ನಲ್ಲಿ ಚೀನಾದ ಲಿನ್ ಜುಸೇನ್ ಎದುರು ಸೆಣಸಾಟ ನಡೆಸಲಿದ್ದು, ಇಂದೇ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಅಂಶ್ಯು ಮಲಿಕ್‌ಗೆ ಸೋಲು: ಭಾರತದ 19 ವರ್ಷದ ಮಹಿಳಾ ಕುಸ್ತಿಪಟು ಅಂಶ್ಯು ಮಲಿಕ್ ಫ್ರೀ ಕ್ವಾರ್ಟರ್ ಫೈನಲ್‌ನಲ್ಲಿ 2-8 ಅಂಕಗಳ ಅಂತರದಲ್ಲಿ ಇರಾನಿನ ಕುರಾಚಿಕಾನ ಎದುರು ಸೋಲನನ್ನುಭವಿಸಿದ್ದಾರೆ. ಮಹಿಳೆಯರ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಮಲಿಕ್ ನಿರಾಸೆ ಅನುಭವಿಸಿದ್ದಾರೆ.