ಟೋಕಿಯೋ 2020 ಮಹಿಳಾ ಹಾಕಿ ತಂಡದ ಕೋಚ್ ಸ್ಥಾನಕ್ಕೆ ಸೋರ್ಡ್ ಮರಿನೆ ಗುಡ್‌ಬೈ..!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ ರಾಣಿ ರಾಂಪಾಲ್ ಪಡೆ
* ಗ್ರೇಟ್ ಬ್ರಿಟನ್ ಎದುರು ರೋಚಕ ಸೋಲು ಕಂಡ ಭಾರತೀಯ ಮಹಿಳಾ ಹಾಕಿ ತಂಡ
* ಭಾರತ ಸೋಲು ಅನುಭವಿಸಿದ ಬೆನ್ನಲ್ಲೇ ಮಹಿಳಾ ತಂಡದ ಕೋಚ್ ತಮ್ಮ ಹುದ್ದೆಗೆ ರಾಜೀನಾಮೆ
ಟೋಕಿಯೋ(ಆ.07): ಭಾರತದ ಮಹಿಳೆಯರ ಹಾಕಿ ತಂಡದ ಪ್ರಧಾನ ಕೋಚ್ ಸ್ಥಾನಕ್ಕೆ ಸೋರ್ಡ್ ಮರಿನೆ ರಾಜೀನಾಮೆ ಘೋಷಿಸಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದವರು ತಿಳಿಸಿದ್ದಾರೆ. ತಂಡದ ಹೆಚ್ಚುವರಿ ಕೋಚ್ ಆಗಿದ್ದ ಜನ್ನೆಕಾ ಶೋಪ್ಮನ್ ಪ್ರಧಾನ ಕೋಚ್ ಆಗಿ ಬಡ್ತಿ ಪಡೆಯುವುದು ಬಹುತೇಕ ಖಚಿತವಾಗಿದೆ.
ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದ ಮಹಿಳಾ ತಂಡದ ಸಾಧನೆಯಲ್ಲಿ ಸೋರ್ಡ್ ಪಾತ್ರ ಪ್ರಮುಖವಾದದ್ದು. ‘ಇದು ನನ್ನ ಕೊನೆಯ ಪಂದ್ಯ. ಈ ತಂಡವನ್ನು ಮಿಸ್ ಮಾಡುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಕುಟುಂಬವನ್ನು ಮಿಸ್ ಮಾಡುತ್ತಿದ್ದೇನೆ. ಕುಟುಂಬವೇ ನನಗೆ ನಂ.1. ಮೂರುವರೇ ವರ್ಷ ಕುಟುಂಬದಿಂದ ದೂರವಿದ್ದ ನಾನು ಈಗ ಅವರ ಜೊತೆ ಕಾಲ ಕಳೆಯಬೇಕಿದೆ’ ಎಂದು ಹೇಳಿದ್ದಾರೆ. 2018ರಿಂದ ಮರಿನೆ ಭಾರತ ತಂಡದ ಕೋಚ್ ಆಗಿ ಕಾರ‍್ಯನಿರ್ವಹಿಸುತ್ತಿದ್ದರು.
ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದೂ ಗೆಲುವು ಕಾಣದೇ ಮುಖಭಂಗ ಅನುಭವಿಸಿದ್ದ ಮಹಿಳಾ ಹಾಕಿ ತಂಡಕ್ಕೆ ಸೋರ್ಡ್ ಮರಿನೆ ಅಕ್ಷರಶಃ ಆಪತ್ಭಾಂಧವರಾಗಿದ್ದರು. ಮರಿನೆ ಮಾರ್ಗದರ್ಶನದಲ್ಲಿ ಉತ್ತಮ ತರಬೇತಿ ಪಡೆಯುವ ಮೂಲಕ ರಾಣಿ ಪಡೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೇರಿ ಗಮನ ಸೆಳೆದಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾಗೆ ಶಾಕ್ ನೀಡುವ ಮೂಲಕ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ರಾಣಿ ಪಡೆ ಸೆಮೀಸ್‌ಗೇರಿ ಇತಿಹಾಸ ನಿರ್ಮಿಸಿತ್ತು.
'ಕೋಟ್ಯಂತರ ಹೃದಯ ಗೆದ್ದಿದ್ದೀರಿ' ಮಹಿಳಾ ಹಾಕಿ ತಂಡಕ್ಕೆ ಪಟ್ನಾಯಕ್ ಅಭಿನಂದನೆ
ಇನ್ನು ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್ ಬ್ರಿಟನ್ ಎದುರು ಭಾರತ ಮಹಿಳಾ ಹಾಕಿ ತಂಡವು 4-3 ಗೋಲುಗಳ ಅಂತರದಲ್ಲಿ ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಒಲಿಂಪಿಕ್ ಪದಕ ಗೆಲ್ಲುವ ಅವಕಾಶದಿಂದ ಕೂದಲೆಳೆ ಅಂತರದಲ್ಲಿ ವಂಚಿತವಾಯಿತು.