ಟೋಕಿಯೋ ಒಲಿಂಪಿಕ್ಸ್: ಪುರುಷ & ಮಹಿಳಾ ಹಾಕಿ ತಂಡಕ್ಕೆ ಫ್ಯಾನ್ಸ್ ಫಿದಾ..!
* ಕಾಕತಾಳೀಯ ಸನ್ನಿವೇಶಗಳಿಗೆ ಸಾಕ್ಷಿಯಾದ ಭಾರತ ಹಾಕಿ ತಂಡಗಳು
* ಮಹಿಳಾ ತಂಡವನ್ನು ಸೋಲಿಸಿದ ದೇಶಕ್ಕೆ ಪುರುಷ ತಂಡ ಶಾಕ್
* ಮಹಿಳಾ ತಂಡವನ್ನು ಸೋಲಿಸಿದರೆ ಹುಡುಗರೂ ಬಿಡ್ಬಿಡ್ತಾರಾ ಹೇಳೀ?
ಟೋಕಿಯೋ(ಆ.05): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಭಿಮಾನಿಗಳನ್ನು ಹೆಚ್ಚು ಗಮನ ಸೆಳೆದ ಕ್ರೀಡೆಯೆಂದರೆ ಅದು ಹಾಕಿ. ರಿಯೋ ಒಲಿಂಪಿಕ್ಸ್‌ನಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದ ಭಾರತದ ಹಾಕಿ ತಂಡಗಳು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೈತ್ಯ ಸಂಹಾರ ಮಾಡುವ ಮೂಲಕ ಗಮನ ಸೆಳೆದಿವೆ. ಈ ಪೈಕಿ ಈಗಾಗಲೇ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಬಲಿಷ್ಠ ಜರ್ಮನಿ ಎದುರು 5-4 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಜಯಿಸಿದ್ದರೆ, ಇನ್ನೊಂದೆಡೆ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಆಗಸ್ಟ್ 06ರಂದು ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
ತೀರಾ ಕಾಕತಾಳೀಯವೆಂಬಂತೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡಗಳು ಮುಯ್ಯಿ ತೀರಿಸಿಕೊಂಡಿವೆ. ಭಾರತ ಪುರುಷರ ತಂಡವನ್ನು ಸೋಲಿಸಿದ ದೇಶಕ್ಕೆ ಮಹಿಳಾ ಹಾಕಿ ತಂಡ ಶಾಕ್ ನೀಡಿದೆ. ಅದೇ ರೀತಿ ಮಹಿಳಾ ಹಾಕಿ ತಂಡವನ್ನು ಸೋಲಿಸಿದ ದೇಶಕ್ಕೆ ಭಾರತ ಪುರುಷರ ತಂಡ ಸೋಲಿಸಿ ಲೆಕ್ಕ ಚುಕ್ತಾ ಮಾಡಿದೆ. ಹೌದು, ಮೊದಲಿಗೆ ಭಾರತೀಯ ಮಹಿಳಾ ಹಾಕಿ ತಂಡವು ಗ್ರೇಟ್ ಬ್ರಿಟನ್ ಎದುರು 0-2 ಅಂತರದಲ್ಲಿ ಸೋಲು ಕಂಡಿತು. ಇನ್ನು ಭಾರತ ಪುರುಷರ ತಂಡವು 3-1 ಅಂತರದಲ್ಲಿ ಬ್ರಿಟನ್ ತಂಡವನ್ನು ಬಗ್ಗುಬಡಿಯಿತು.
ಇಡೀ ದೇಶವೇ ನಿಮ್ಮ ಸಾಧನೆಯನ್ನು ಸಂಭ್ರಮಿಸುತ್ತಿದೆ: ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ಇನ್ನು ಭಾರತ ಪುರುಷರ ತಂಡವು ಆಸ್ಟ್ರೇಲಿಯಾ ಎದುರು 7-1 ಗೋಲುಗಳ ಅಂತರದ ಆಘಾತಕಾರಿ ಸೋಲು ಕಂಡಿತು. ಇದಕ್ಕೆ ಪ್ರತಿಯಾಗಿ ಕ್ವಾರ್ಟರ್ ಫೈನಲ್‌ನಲ್ಲಿ ರಾಣಿ ರಾಂಪಾಲ್ ಪಡೆ 1-0 ಗೋಲು ಅಂತರದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರದಬ್ಬಿತು. ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ರಾಣಿ ರಾಂಪಾಲ್ ಪಡೆಯನ್ನು ಅರ್ಜಿಂಟೀನಾ 2-1 ಗೋಲುಗಳ ಅಂತರದಲ್ಲಿ ಮಣಿಸಿ ಫೈನಲ್‌ಗೇರಿತ್ತು. ಮಹಿಳಾ ತಂಡ ಸೋಲುವ ಮುನ್ನವೇ ಗ್ರೂಪ್ ಹಂತದಲ್ಲೇ ಮನ್‌ಪ್ರೀತ್ ಸಿಂಗ್ ಪಡೆ 3-1 ಅಂತರದಲ್ಲಿ ಅರ್ಜಿಂಟೀನಾಗೆ ಮುಟ್ಟಿನೋಡಿಕೊಳ್ಳುವಂತಹ ಸೋಲಿನ ಶಾಕ್ ನೀಡಿತ್ತು.
ಇನ್ನು ಗುಂಪುದಲ್ಲಿ ರಾಣಿ ರಾಂಪಾಲ್ ಪಡೆ ಜರ್ಮನಿ ಎದುರು 0-2 ಗೋಲುಗಳ ಅಂತರದ ಸೋಲು ಅನುಭವಿಸಿತ್ತು. ಮಹಿಳಾ ತಂಡದ ಸೋಲಿಗೆ ಭಾರತದ ಪುರುಷರ ತಂಡ ಕಂಚಿನ ಪದಕದ ಕಾದಾಟದಲ್ಲಿ ಜರ್ಮನಿಗೆ 5-4 ಗೋಲು ಅಂತರದ ಸೋಲುಣಿಸುವ ಮೂಲಕ ಸೇಡು ತೀರಿಸಿಕೊಳ್ಳುವುದರ ಜತೆಗೆ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡಿದೆ. ಇನ್ನು ಶುಕ್ರವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ರಾಣಿ ರಾಂಪಾಲ್ ಪಡೆ ಲೀಗ್ ಹಂತದಲ್ಲಿ ಅನುಭವಿಸಿದ್ದ ಸೋಲಿಗೆ ಗ್ರೇಟ್ ಬ್ರಿಟನ್ ಎದುರು ಸೇಡು ತೀರಿಸಿಕೊಳ್ಳುವುದರ ಜತೆಗೆ ಕಂಚಿನ ಪದಕಕ್ಕೆ ಕೊರಳೊಡ್ಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.