ಟೋಕಿಯೋ 2020: ಡಿಸ್ಕಸ್ ಥ್ರೋವರ್ ಕಮಲ್‌ಪ್ರೀತ್ ಕೌರ್ ಪದಕದ ಕನಸು ಭಗ್ನ
* ಟೋಕಿಯೋ ಒಲಿಂಪಿಕ್ಸ್ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‌ಪ್ರೀತ್ ಕೌರ್‌ಗೆ ನಿರಾಸೆ
* ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಭಾರತದ ಡಿಸ್ಕಸ್ ಥ್ರೋ ಪಟು
* ಅಥ್ಲೆಟಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ಕನಸು ಭಗ್ನ
ಟೋಕಿಯೋ(ಆ.02): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಪದಕ ಆಸೆ ಮೂಡಿಸಿದ್ದ ಕಮಲ್‌ಪ್ರೀತ್ ಕೌರ್, ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದೇ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಫೈನಲ್‌ನಲ್ಲಿ ಕಮಲ್‌ಪ್ರೀತ್ ಕೌರ್ 63.70 ಮೀಟರ್ ದೂರ ಎಸೆಯುವುದರೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಹೌದು, ಫೈನಲ್‌ಗೂ ಮುನ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ 64 ಮೀಟರ್ ದೂರ ಡಿಸ್ಕಸ್ ಥ್ರೋ ಮಾಡುವ ಮೂಲಕ ಗಮನ ಸೆಳೆದಿದ್ದ ಕಮಲ್‌ಪ್ರೀತ್ ಫೈನಲ್‌ನಲ್ಲಿ ಅದೇ ರೀತಿಯ ಪ್ರದರ್ಶನ ತೋರಲು ವೈಫಲ್ಯ ಅನುಭವಿಸಿದರು. ಮೊದಲ ಪ್ರಯತ್ನದಲ್ಲಿ 61.62 ಮೀಟರ್ ದೂರ ಎಸೆದಿದ್ದ ಕಮಲ್‌ಪ್ರೀತ್, ಎರಡನೇ ಪ್ರಯತ್ನವನ್ನು ಪೌಲ್ ಮಾಡಿಕೊಂಡರು. ಇನ್ನು ಮೂರನೇ ಪ್ರಯತ್ನದಲ್ಲಿ ಕೌರ್ 63.70 ಮೀಟರ್ ದೂರ ಎಸೆಯುವ ಮೂಲಕ ಟಾಪ್ 8 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಟೋಕಿಯೋ 2020: ಡಿಸ್ಕಸ್ ಥ್ರೋ ಫೈನಲ್‌ಗೆ ಮಳೆ ಅಡ್ಡಿ, 7ನೇ ಸ್ಥಾನಕ್ಕೆ ಕುಸಿದ ಕಮಲ್‌ಪ್ರೀತ್
ಫೈನಲ್‌ನಲ್ಲಿ ಪಾಲ್ಗೊಂಡಿದ್ದ 12 ಡಿಸ್ಕಸ್ ಥ್ರೋವರ್‌ಗಳ ಪೈಕಿ ಮೂರು ಸುತ್ತು ಮುಕ್ತಾಯದ ಬಳಿಕ ಅಗ್ರ 8 ಸ್ಥಾನ ಪಡೆದ ಅಥ್ಲೀಟ್‌ಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಕೊನೆಯ ಸ್ಥಾನ ಪಡೆದ ಡಿಸ್ಕಸ್ ಥ್ರೋ ಪಟುಗಳು ಹೊರಬಿದ್ದರು.
ಇನ್ನು ನಾಲ್ಕನೇ ಪ್ರಯತ್ನವನ್ನು ಪೌಲ್ ಮಾಡಿದ ಕಮಲ್‌ಪ್ರೀತ್, 5ನೇ ಪ್ರಯತ್ನದಲ್ಲಿ ಕೇವಲ 61.37 ಮೀಟರ್ ದೂರವಷ್ಟೇ ಎಸೆಯಲು ಶಕ್ತರಾದರು. ಇನ್ನು ಆರನೇ ಹಾಗೂ ಸುತ್ತನ್ನು ಪೌಲ್ ಮಾಡಿಕೊಳ್ಳುವ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮೊದಲ ಪ್ರಯತ್ನದಲ್ಲೇ 68.98 ಮೀ ದೂರ ಎಸೆದ ಅಮೆರಿಕದ ವಾಲರಿ ಅಲ್ಮನ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಜರ್ಮನಿಯ ಕ್ರಿಸ್ಟಿನ್ ಫುಂಡಿಜ್ ಬೆಳ್ಳಿ ಹಾಗೂ ಕ್ಯೂಬಾದ ಯೈಮ್ ಪೆರೆಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.