ಟೋಕಿಯೋ 2020: ಹಾಂಕಾಂಗ್ ಆಟಗಾರ್ತಿ ಬಗ್ಗುಬಡಿದು ನಾಕೌಟ್ ಹಂತಕ್ಕೇರಿದ ಸಿಂಧು
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಸಿಂಧು ಗೆಲುವಿನ ನಾಗಾಲೋಟ
* ಪ್ರೀಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು
* ಹಾಂಕಾಂಗ್ ಆಟಗಾರ್ತಿ ಎದುರು ಅನಾಯಾಸವಾಗಿ ಗೆಲುವಿನ ನಗೆ ಬೀರಿದ ರಿಯೋ ಪದಕ ವಿಜೇತೆ
ಟೋಕಿಯೋ(ಜು.28): ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ರೀಕ್ವಾರ್ಟರ್ ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಆಶಾಕಿರಣ ಎನಿಸಿರುವ ಸಿಂಧು ಗ್ರೂಪ್ 'ಜೆ'ನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಅಂತಿಮ 16ರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಹಾಂಕಾಂಗ್‌ನ ಚ್ಯುಂಗ್ ನಿಂಗ್ ಯಿ ವಿರುದ್ದ 21-9, 21-16 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿಂಧು ನಾಕೌಟ್ ಹಂತ ಪ್ರವೇಶಿಸಿದ್ದಾರೆ.
ಮೊದಲ ಗೇಮ್‌ನಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿದ್ದ ಸಿಂಧುವಿಗೆ ಎರಡನೇ ಗೇಮ್‌ನಲ್ಲಿ ಹಾಂಕಾಂಗ್ ಆಟಗಾರ್ತಿಯಿಂದ ಪ್ರಬಲ ಪೈಪೋಟಿ ಎದುರಾಯಿತು. ಆರಂಭದಿಂದಲೇ ಉಭಯ ಆಟಗಾರ್ತಿಯರು ಸಮಬಲದ ಪ್ರದರ್ಶನ ತೋರಿದರು. ಆದರೆ 14 ಅಂಕಗಳಿಂದ ಸತತ 6 ಅಂಕಗಳನ್ನು ಗಳಿಸುವ ಮೂಲಕ ಸಿಂಧು, ಪಂದ್ಯವನ್ನು ತಮ್ಮತ್ತ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.
ಈಗಾಗಲೇ ಭಾರತದ ಪುರುಷರ ಡಬಲ್ಸ್ ಹಾಗೂ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧಿಗಳು ತಮ್ಮ ಹೋರಾಟವನ್ನು ಮುಗಿಸಿದ್ದಾರೆ. ಹೀಗಾಗಿ ಎಲ್ಲಾ ಭಾರತೀಯರ ಚಿತ್ತ ಸಿಂಧು ಮೇಲೆ ನೆಟ್ಟಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸಿಂಧು ಪದಕದ ಬೇಟೆಯಾಡಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.