* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ಪ್ರದರ್ಶನ ತೋರಿದ ಭಾರತ ಮಹಿಳಾ ಹಾಕಿ ತಂಡ* ರಾಣಿ ರಾಂಪಾಲ್‌ ಯಶಸ್ಸಿನ ಹಿಂದಿದೆ ಕೋಚ್ ಸೋರ್ಡ್‌ ಮರಿನೆ* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿ ಸಾಧನೆ ಮಾಡಿದ್ದ ಮಹಿಳಾ ಹಾಕಿ ತಂಡ

ಟೋಕಿಯೋ(ಆ.07): ರಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಒಂದೂ ಗೆಲುವು ದಾಖಲಿಸದೇ ತವರಿಗೆ ವಾಪಾಸಾಗಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ತಂಡಗಳನ್ನು ಬಗ್ಗುಬಡಿಯುವ ಇಡೀ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿತು. ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್ ಬ್ರಿಟನ್ ಎದುರು ದಿಟ್ಟ ಹೋರಾಟ ನೀಡುವ ಮೂಲಕ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಭಾರತ ಮಹಿಳಾ ತಂಡ ಈ ರೀತಿ ಹೋರಾಟ ನಡೆಸುವಂತೆ ಆಗಿದ್ದು ದಿನ ಬೆಳಗಾವುದರೊಳಗಾಗಿ ಅಲ್ಲ, ಅದರ ಹಿಂದೆ ಕೋಚ್ ಮರಿನೆ ಅವಿರತ ಶ್ರಮವಿದೆ.

ಹೌದು, 2018ರ ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ನೆದರ್‌ಲೆಂಡ್ಸ್‌ನ ಸೋರ್ಡ್‌ ಮರಿನೆಯನ್ನು ಭಾರತ ಮಹಿಳಾ ತಂಡದ ಕೋಚ್‌ ಆಗಿ ನೇಮಿಸಿದಾಗ ಹಲವರು ಹುಬ್ಬೇರಿಸಿದ್ದರು. ನೆದರ್‌ಲೆಂಡ್ಸ್‌ ಹಿರಿಯ ಮಹಿಳಾ ತಂಡ ಹಾಗೂ ಅಂಡರ್‌-21 ಪುರುಷರ ತಂಡ, ಕೆಲ ಕ್ಲಬ್‌ಗಳ ಕೋಚ್‌ ಆಗಿ ಅನುಭವ ಹೊಂದಿದ್ದ ಮರಿನೆ ಹೆಸರು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ಆದರೆ ಮರಿನೆ ಭಾರತ ತಂಡ ಸಾಗುತ್ತಿದ್ದ ದಿಕ್ಕು ಬದಲಿಸಲು ಬಹಳಷ್ಟು ಶ್ರಮಿಸಿದರು. ತಮ್ಮ ಮಾರ್ಗದರ್ಶನದಲ್ಲಿ ಆಡಿದ್ದ ಜನ್ನೆಕಾ ಶಾಪ್ಮನ್‌ರನ್ನು ಹೆಚ್ಚುವರಿ ಕೋಚ್‌ ಆಗಿ ನೇಮಿಸಿಕೊಂಡ ಮರಿನೆ, ವೈಜ್ಞಾನಿಕ ಸಲಹೆಗಾರ ವೇಯ್ನ್ ಲೊಂಬಾರ್ಡ್‌ರಿಂದ ಉತ್ತಮ ಬೆಂಬಲ ಪಡೆದರು.

ಟೋಕಿಯೋ 2020 ಮಹಿಳಾ ಹಾಕಿ ತಂಡದ ಕೋಚ್‌ ಸ್ಥಾನಕ್ಕೆ ಸೋರ್ಡ್‌ ಮರಿನೆ ಗುಡ್‌ಬೈ..!

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ನೆದರ್‌ಲೆಂಡ್ಸ್‌ಗೆ ತೆರಳದೆ ತಂಡದ ಹಿತದೃಷ್ಟಿಯಿಂದ ಬೆಂಗಳೂರಿನ ಸಾಯ್‌ ಕೇಂದ್ರದಲ್ಲೇ ಉಳಿದುಕೊಂಡ ಮರಿನೆ, ಲಾಕ್‌ಡೌನ್‌ನಿಂದಾಗಿ ತಂಡದ ಅಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ಮರಿನೆ ಹಾಗೂ ಜನ್ನೆಕಾ ತಾಂತ್ರಿಕವಾಗಿ ತಂಡವನ್ನು ಬಲಿಷ್ಠಗೊಳಿಸಿದರೆ, ಲೊಂಬಾರ್ಡ್‌ ಆಟಗಾರ್ತಿಯರ ಫಿಟ್ನೆಸ್‌ ಹೆಚ್ಚಿಸಿದರು. ಲೊಂಬಾರ್ಡ್‌ ನೇಮಕಗೊಳ್ಳುವ ಮೊದಲು ಭಾರತೀಯ ಆಟಗಾರ್ತಿಯರು ಯೋ-ಯೋ ಫಿಟ್ನೆಸ್‌ ಪರೀಕ್ಷೆಯಲ್ಲಿ ಗರಿಷ್ಠ 17 ಸ್ಕೋರ್‌ ಮಾಡುತ್ತಿದ್ದರು. ಈಗ ಬಹುತೇಕರು 23 ದಾಟುತ್ತಾರೆ. ಟೋಕಿಯೋ ಗೇಮ್ಸ್‌ ಯಶಸ್ಸಿಗೆ ಆಟಗಾರ್ತಿಯರ ಫಿಟ್ನೆಸ್‌ ಕೂಡ ಪ್ರಮುಖ ಕಾರಣ.