ನವದೆಹಲಿ(ಮೇ.12): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ಗೆ 2 ತಿಂಗಳು ಮಾತ್ರ ಬಾಕಿ ಇದ್ದು, ಭಾರತ ಶೂಟಿಂಗ್‌ ತಂಡ ಮಂಗಳವಾರ ಕ್ರೊವೇಷಿಯಾಗೆ ಪ್ರಯಾಣ ಬೆಳೆಸಿತು. 

13 ಸದಸ್ಯರ ತಂಡ ಕ್ರೊವೇಷಿಯಾದ ರಾಜಧಾನಿ ಜಾಗ್ರೆಬ್‌ನಲ್ಲಿ ಅಭ್ಯಾಸ ನಡೆಸಲಿದ್ದು ಮೇ 20ರಿಂದ ಜೂ.6ರ ವರೆಗೂ ನಡೆಯಲಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಹಾಗೂ ಜೂ.22ರಿಂದ ಜು.3ರ ವರೆಗೂ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೆಚ್ಚು ಪದಕಗಳನ್ನು ಗೆದ್ದು ತರುವಂತೆ ಶುಭ ಹಾರೈಸಿದ್ದಾರೆ.

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಭಾರತ ಶೂಟರ್‌ಗಳ ತಂಡ ಕ್ರೊವೇಷಿಯಾಗೆ ವಿಮಾನ ಏರಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ವು ಶೂಟರ್‌ಗಳಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ. ಕ್ರೊವೇಷಿಯಾಗೆ ಬಂದಿಳಿದ ಬಳಿಕ ಭಾರತದ ಶೂಟರ್‌ಗಳು 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಅದಾದ ಬಳಿಕ ತರಬೇತಿ ನಡೆಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇನ್ನು ಜೂನ್ 17ರಂದು ಟೋಕಿಯೋಗೆ ಭಾರತದ ಶೂಟರ್‌ಗಳು ಪ್ರಯಾಣ ಬೆಳೆಸಲಿದ್ದಾರೆ.

ಕ್ರೊವೇಷಿಯಾದಿಂದ ನೇರವಾಗಿ ಟೋಕಿಯೋಗೆ ತೆರಳಲಿರುವ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಪದಕ ಗೆಲ್ಲುವ ಪ್ರಬಲ ಸ್ಪರ್ಧಿಗಳೆನಿಸಿಕೊಂಡಿದ್ದಾರೆ. ಈ ಪೈಕಿ ಮನು ಭಾಕರ್, ಸೌರಭ್‌ ಚೌಧರಿ, ಅಂಗದ್ ವೀರ್, ಸಂಜೀವ್ ರಜಪೂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 23ರಿಂದ ಆಗಸ್ಟ್ 08ರವರೆಗೆ ಜರುಗಲಿದೆ. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ.