ಸೋಫಿಯಾ(ಮೇ.07): ಭಾರತದ ಕುಸ್ತಿಪಟು ಸುಮಿತ್ ಮಲಿಕ್ 125 ಕೆ.ಜಿ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸತ್ಯವ್ರತ್‌ ಕಡಿಯಾನ್‌ ಹಾಗೂ ಅಮಿತ್‌ ಧನ್‌ಕರ್‌ ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಕುಸ್ತಿ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ.

ಸುಮಿತ್ ಮಲಿಕ್ ಸೆಮಿಫೈನಲ್‌ನಲ್ಲಿ ವೆನಿಜುಯಲಾದ ಜೋಸ್ ಡೇನಿಯಲ್‌ ಡಯಾಜ್ ರೋಬರ್ಟಿ ವಿರುದ್ದ 5-0 ಅಂಕಗಳಲ್ಲಿ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಇನ್ನು ಪದಕಕ್ಕಾಗಿ ಇಂದು(ಶುಕ್ರವಾರ) ಪೈಪೋಟಿ ನಡೆಯಲಿದೆ.ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕುಸ್ತಿಪಟುಗಳಿಗೆ ಇದು ಕೊನೆ ಅವಕಾಶವಾಗಿತ್ತು.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ 7ನೇ ಭಾರತೀಯ ಕುಸ್ತಿಪಟು ಎನ್ನುವ ಗೌರವಕ್ಕೆ ಸುಮಿತ ಭಾಜನರಾಗಿದ್ದಾರೆ. ಈಗಾಗಲೇ ರವಿ ದಹಿಯಾ, ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಪುರುಷರ ವಿಭಾಗದಲ್ಲಿ ಟೋಕಿಯೋಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲಿ ವಿನೇಶ್ ಫೋಗಟ್‌, ಅಂಶು ಮಲಿಕ್ ಹಾಗೂ ಸೋನಮ್ ಮಲಿಕ್ ಟೋಕಿಯೋ ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ.

ಒಲಿಂಪಿಕ್ಸ್‌ಗೆ ತೆರಳಲಿರುವ ಶೂಟರ್‌ಗಳಿಗೆ ಲಸಿಕೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಹಲವು ಭಾರತೀಯ ಶೂಟರ್‌ಗಳು, ಕೋಚ್‌ ಹಾಗೂ ಅಧಿಕಾರಿಗಳು ಗುರುವಾರ ವಿವಿಧ ನಗರಗಳಲ್ಲಿ ಮೊದಲ ಡೋಸ್‌ ಕೊರೋನಾ ಲಸಿಕೆ ಪಡೆದರು. 

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನ!

ಶೂಟರ್‌ಗಳು ಒಲಿಂಪಿಕ್ಸ್‌ಗೂ ಮೊದಲು ಮೇ 20ರಿಂದ ಜೂ.6ರ ವರೆಗೂ ಸರ್ಬಿಯಾದಲ್ಲಿ ನಡೆಯಲಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದು, ಅಲ್ಲಿಂದ ನೇರವಾಗಿ ಟೋಕಿಯೋಗೆ ತೆರಳಲಿದ್ದಾರೆ. ಜುಲೈ 23ರಿಂದ ಒಲಿಂಪಿಕ್ಸ್‌ ಆರಂಭಗೊಳ್ಳಲಿದ್ದು, ಶೂಟಿಂಗ್‌ನಲ್ಲಿ ಭಾರತ 15 ಸದಸ್ಯರನ್ನು ಕಣಕ್ಕಿಳಿಸಲಿದೆ.