#BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್
2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಕೊರೋನಾ ವೈರಸ್ ಬಲಿಪಡೆದಿದೆ. ಈ ವರ್ಷ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವುದಿಲ್ಲ ಎಂದು ಸ್ವತಃ ಜಪಾನ್ ಪ್ರಧಾನಿ ಖಚಿತ ಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಮಾ.24): ಬಹುನಿರೀಕ್ಷಿತ 2020ರ ಜುಲೈ 24ರಿಂದ ಆರಂಭವಾಗಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೋನಾ ವೈರಸ್ ಭೀತಿಯಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದೆ. ಅಥ್ಲೀಟ್‌ಗಳ ಹಾಗೂ ಪ್ರೇಕ್ಷಕರ ಸೇಫ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರೀಡಾಜಾತ್ರೆಯನ್ನು ಮುಂದೂಡಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಜಪಾನ್ ಪ್ರಧಾನಿ ಖಚಿತಪಡಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ ಖಚಿತ..?
ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡಬೇಕು ಎನ್ನುವ ನನ್ನ ಪ್ರಸ್ತಾವವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮರು ಮಾತಿಲ್ಲದೇ ಒಪ್ಪಿಕೊಂಡರು ಎಂದು ಜಪಾನ್ ಪ್ರಧಾನಮಂತ್ರಿ ಶಿಂನ್ಜೊ ಅಬೆ ತಿಳಿಸಿದ್ದಾರೆ. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಸಹಾ 2021ಕ್ಕೆ ಮುಂದೂಡಲ್ಪಟ್ಟಿದೆ.
ಸೋಮವಾರವಷ್ಟೇ ಕೆನಡಾ ದೇಶವು ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಒಲಿಂಪಿಕ್ ಸಮಿತಿ 2020ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯೊಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಜಪಾನ್ ಪ್ರಧಾನಿ ಈ ವಿಚಾರವನ್ನು ಅಧಿಕೃತಪಡಿಸಿದ್ದಾರೆ.
1ರಿಂದ 2 ವರ್ಷ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ?
ಕೊರೋನಾ ವೈರಸ್ ಸೋಂಕು ಈಗಾಗಲೇ ಹಲವು ಕ್ರೀಡಾಕೂಟಗಳ ಮೇಲೆ ಕೆಂಗಣ್ಣು ಬೀರಿದ್ದು, 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಹಾ ಏಪ್ರಿಲ್ 15ಕ್ಕೆ ಮುಂದೂಡುವಂತೆ ಮಾಡಿದೆ. ಇನ್ನು ಪಿಎಸ್‌ಎಲ್(ಪಾಕಿಸ್ತಾನ್ ಸೂಪರ್ ಲೀಗ್) ನಾಕೌಟ್ ಪಂದ್ಯಗಳು ದಿಢೀರ್ ಆಗಿ ರದ್ದಾಗಿವೆ. ಇನ್ನು ಭಾರತ-ದಕ್ಷಿಣ ಆಫ್ರಿಕಾ ಹಾಗೆಯೇ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗಳು ಮಧ್ಯದಲ್ಲೇ ರದ್ದಾಗಿವೆ.