Asianet Suvarna News Asianet Suvarna News

ಟೋಕಿಯೋ 2020: ಮೂವರು ಕ್ರೀಡಾಪಟುಗಳಿಗೆ ಸೋಂಕು; ಒಲಿಂಪಿಕ್ಸ್‌ನಿಂದ ಔಟ್‌

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೇಲೆ ಕೋವಿಡ್ ವಕ್ರದೃಷ್ಠಿ

* ಕೋವಿಡ್‌ಗೆ ಒಳಗಾದ ಮೂವರು ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಕ್ಕೆ

*  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

Tokyo 2020 three athletes test COVID positive in Tokyo days before Games kvn
Author
Tokyo, First Published Jul 22, 2021, 8:30 AM IST

ಟೋಕಿಯೋ(ಜು.22): ಒಲಿಂಪಿಕ್ಸ್‌ಗೆ ಕೊರೋನಾ ಆತಂಕ ನಿಲ್ಲುತ್ತಿಲ್ಲ. ಸೋಂಕಿಗೆ ತುತ್ತಾದ ಓರ್ವ ಪುರುಷ ಹಾಗೂ ಇಬ್ಬರು ಮಹಿಳಾ ಕ್ರೀಡಾಪಟುಗಳು ಕ್ರೀಡಾಕೂಟದಿಂದಲೇ ಹೊರಬಿದ್ದಿದ್ದಾರೆ. ಚಿಲಿಯ ಟೆಕ್ವಾಂಡೋ ಪಟು ಫರ್ನಾಂಡಾ ಆಗ್ಯುರೆ ಹಾಗೂ ನೆದರ್‌ಲೆಂಡ್ಸ್‌ನ ಸ್ಕೇಟ್‌ಬೋರ್ಡರ್‌ ಕ್ಯಾಂಡಿ ಜೇಕಬ್ಸ್‌ ಹಾಗೂ ಜೆಕ್‌ ಗಣರಾಜ್ಯದ ಟೇಬಲ್ ಟೆನಿಸ್ ಆಟಗಾರ ಪೆವೆಲ್‌ ಸಿರುಚಿಕ್‌ ಬುಧವಾರ ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಬಿದ್ದರು.

ಏರ್‌ಪೋರ್ಟ್‌ನಲ್ಲಿ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಫರ್ನಾಂಡಾಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಯಿತು. ಉಜ್ಬೇಕಿಸ್ತಾನದಿಂದ ಟೋಕಿಯೋಗೆ ಆಗಮಿಸಿದ್ದ ಫರ್ನಾಂಡಾ ಕೋವಿಡ್‌ ನೆಗೆಟಿವ್‌ ವರದಿ ತಂದಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಆ್ಯಂಟಿಜೆನ್‌ ಹಾಗೂ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳ ವರದಿ ಪಾಸಿಟಿವ್‌ ಬಂತು. ಹೀಗಾಗಿ ಆಕೆಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಜಪಾನ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಬಂದಿದೆ: ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಚ್

ಇನ್ನು ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಿದ್ದ ಜೇಕಬ್ಸ್‌, ದೈನಂದಿನ ಕೋವಿಡ್‌ ಪರೀಕ್ಷೆ ವೇಳೆ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಇವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪೆವೆಲ್‌ ಸಿರುಚಿಕ್‌ ಅವರಿಗೆ ಸೋಂಕು ತಗುಲಿದ್ದನ್ನು ಜೆಕ್ ಗಣರಾಜ್ಯದ ಒಲಿಂಪಿಕ್ಸ್‌ ಸಮಿತಿ ಖಚಿತಪಡಿಸಿದ್ದು, ಅವರು ಸದ್ಯ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಪೆವೆಲ್‌ ಸಿರುಚಿಕ್‌ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದೇ ವೇಳೆ ಅಮೆರಿಕದ ಬೀಚ್ ವಾಲಿಬಾಲ್‌ ಆಟಗಾರ ಟೇಲರ್ ಕ್ರಾಬ್‌ ಅವರಿಗೂ ಕೊರೋನಾ ಸೋಂಕು ತಗುಲಿದ್ದು, ಅವರೂ ಕೂಡಾ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆಯಾದರೂ, ಇನ್ನೂ ಖಚಿತವಾಗಿಲ್ಲ. ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಆಗಸ್ಟ್ 08ರವರೆಗೆ ನಡೆಯಲಿದೆ. ಕೋವಿಡ್ ಭೀತಿಯಿದ್ದರೂ ಕ್ರೀಡಾಕೂಟ ರದ್ದುಗೊಳಿಸುವುದಿಲ್ಲ ಎಂದು ಐಒಸಿ ಸ್ಪಷ್ಟಪಡಿಸಿದೆ.
 

Follow Us:
Download App:
  • android
  • ios