ಟೋಕಿಯೋ 2020: ಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ನೀರಜ್ ಚೋಪ್ರಾ
* ಜಾವಲಿನ್ ಅರ್ಹತಾ ಸುತ್ತಿನಿಂದ ಫೈನಲ್‌ಗೆ ಲಗ್ಗೆಯಿಟ್ಟ ನೀರಜ್ ಚೋಪ್ರಾ
* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಜಾವಲಿನ್ ಪಟು
* ಮತ್ತೋರ್ವ ಸ್ಪರ್ಧಿ ಶಿವಪಾಲ್ ಫೈನಲ್‌ಗೇರಲು ವಿಫಲ
ಟೋಕಿಯೋ(ಆ.04): ಭಾರತದ ತಾರಾ ಜಾವಲಿನ್ ಪಟು ನೀರಜ್ ಚೋಪ್ರಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲೇ 86.55 ಮೀಟರ್ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನ ಜಾವಲಿನ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಕೂಡಾ ಒಬ್ಬರು ಎನಿಸಿದ್ದಾರೆ.
ಹೌದು, ಈಗಾಗಲೇ ಏಷ್ಯನ್ ಗೇಮ್ಸ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚಿಕೊಂಡಿರುವ ನೀರಜ್ ಚೋಪ್ರಾ ಮೇಲೆ ಇಡೀ ದೇಶವೇ ಚಿತ್ತ ನೆಟ್ಟಿದೆ. 'ಎ' ಗುಂಪಿನಲ್ಲಿ 16 ಜಾವಲಿನ್ ಪಟುಗಳು ಭಾಗಿಯಾಗಿದ್ದರು. ಫೈನಲ್‌ಗೆ ಪ್ರವೇಶ ಪಡೆಯಲು 83.5 ಮೀಟರ್ ನಿಗದಿ ಮಾಡಲಾಗಿತ್ತು. ಎ ಹಾಗೂ ಬಿ ಗುಂಪಿನಲ್ಲಿ ಅಗ್ರ 12 ಜಾವಲಿನ್ ಪಟುಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. 'ಎ' ಗುಂಪಿನ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ 86.55 ಮೀಟರ್ ಜಾವಲಿನ್ ಎಸೆಯುವ ಮೂಲಕ ನೇರವಾಗಿ ಫೈನಲ್‌ಗೇರುವಲ್ಲಿ ನೀರಜ್ ಯಶಸ್ವಿಯಾದರು. ಅರ್ಹತೆ ಗಿಟ್ಟಿಸಿಕೊಂಡ ಬಳಿಕ ನೀರಜ್ ಮತ್ತೆ ಜಾವಲಿನ್ ಎಸೆಯಲಿಲ್ಲ. ಇನ್ನುಳಿದಂತೆ ಗ್ರೇಟ್ ಬ್ರಿಟನ್ನಿನ ಜಾಹನೆಸ್ ವಿಕ್ಟರ್(85.64 ಮೀ) ಹಾಗೂ ಫಿನ್‌ಲ್ಯಾಂಡ್‌ನ ಲಸ್ಸಿ ಎಟೆಲೊಟಲೋ(84.5 ಮೀ) ಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡರು.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ: ಮೀರಾಬಾಯಿ ಚಾನು
ಇನ್ನು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತದ ಮತ್ತೋರ್ವ ಜಾವಲಿನ್ ಪಟು ಶಿವಪಾಲ್ ಸಿಂಗ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಶಿವಪಾಲ್ ಸಿಂಗ್ 76.4 ಮೀಟರ್ ದೂರ ಎಸೆಯುವಲ್ಲಿ ಮಾತ್ರ ಶಕ್ತರಾದರು. ಈ ಮೂಲಕ 'ಬಿ' ಗುಂಪಿನಲ್ಲಿ ಫೈನಲ್‌ಗೇರುವ ಅವಕಾಶದಿಂದ ವಂಚಿತರಾದರು.
ಒಟ್ಟಾರೆ ಎ ಹಾಗೂ ಬಿ ಗುಂಪಿನಿಂದ 82.4 ಮೀಟರ್ ದೂರ ಎಸೆದ 12 ಜಾವಲಿನ ಪಟುಗಳು ಇದೀಗ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. 'ಬಿ' ಗುಂಪಿನಲ್ಲಿ ಅರ್ಹದ್ ನದೀಮ್ 83.5 ಮೀಟರ್ ದೂರ ಎಸೆಯುವ ಮೂಲಕ ಗರಿಷ್ಠ ದೂರ ಜಾವಲಿನ್ ಥ್ರೋ ಮಾಡಿದ ಅಥ್ಲೀಟ್ ಎನಿಸಿಕೊಂಡರು. ಒಟ್ಟಾರೆ ಎ ಹಾಗೂ ಬಿ ಗುಂಪಿನಲ್ಲಿ ಗರಿಷ್ಠ ದೂರ ಎಸೆದ ಸ್ಪರ್ಧಿಗಳಲ್ಲಿ ನೀರಜ್ ಚೋಪ್ರಾ ಮೊದಲ ಸ್ಥಾನದಲ್ಲಿದ್ದು, ಇದೇ ರೀತಿಯ ಪ್ರದರ್ಶನ ಆಗಸ್ಟ್ 07ರಂದು ನಡೆಯಲಿರುವ ಫೈನಲ್‌ನಲ್ಲೂ ತೋರಿದರೆ ಭಾರತಕ್ಕೆ ಅಥ್ಲೀಟಿಕ್ಸ್ ವಿಭಾಗದಲ್ಲಿ ಮೊದಲ ಒಲಿಂಪಿಕ್ಸ್ ಪದಕ ಖಚಿತವಾಗಲಿದೆ.