* ಮೀರಾಬಾಯಿ ಚಾನು ಬೆಂಕಿಯಲ್ಲಿ ಅರಳಿದ ಹೂವು* ಕಾಡಿನಲ್ಲಿ ಕಟ್ಟಿಗೆ ಹೊರಯುತ್ತಿದ್ದಾಕೆ ಈಗ ದೇಶದ ಐಕಾನ್‌* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧಕಿ ಮೀರಾಬಾಯಿ ಚಾನು

ಇಂಪಾಲ(ಜು.25) ಮಣಿಪುರದ ಪುಟ್ಟಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಚಾನು, ಬಾಲ್ಯದಲ್ಲೇ ವೇಟ್‌ಲಿಫ್ಟರ್‌!. ಬಾಲಕಿಯಾಗಿದ್ದಾಗ ತಮ್ಮ ಸಹೋದರನೊಂದಿಗೆ ಕಾಡಿಗೆ ಹೋಗಿ ಕಟ್ಟಿಗೆಗಳನ್ನು ಹೊತ್ತು ಮನೆಗೆ ತರುತ್ತಿದ್ದರು. ಸಹೋದರನಿಂದ ಸಾಧ್ಯವಾಗದಷ್ಟು ಭಾರವನ್ನು ಚಾನು ಒಬ್ಬರೇ ಹೊತ್ತು ತರುತ್ತಿದ್ದನ್ನು ಕಂಡು ಹಳ್ಳಿಯವರೆಲ್ಲಾ ಬೆರಗಾಗುತ್ತಿದ್ದರು ಎಂದು ಅವರ ತಾಯಿ ಬಿಯೊಂಟ್‌ ಮೀಟೆ ನೆನಪಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಬಹಳ ದೂರ ತೆರಳಿ ಬಿಂದಿಗೆಗಳಲ್ಲಿ ಕುಡಿಯಲು ನೀರು ಸಹ ತರುತ್ತಿದ್ದರಂತೆ. ಈಗ ಇಡೀ ದೇಶವೇ ಹೆಮ್ಮೆ ಪಡುವಂತೆ ಟೋಕಿಯೋ ಒಲಿಂಪಿಕ್ಸ್ 49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ

ಮಾಜಿ ವೇಟ್‌ಲಿಫ್ಟರ್‌ ಕುಂಜುರಾಣಿ ದೇವಿ ಅವರಿಂದ ಸ್ಫೂರ್ತಿ ಪಡೆದ ಚಾನು, ತಾವೂ ವೇಟ್‌ಲಿಫ್ಟರ್‌ ಆಗಲು ನಿರ್ಧರಿಸಿ, ಇಂಪಾಲ್‌ ಬಳಿಯಿರುವ ನೊಂಗ್‌ಪೊಕ್‌ ಕಾಕ್ಚಿಂಗ್‌ ಎನ್ನುವ ಸಣ್ಣ ಪಟ್ಟಣಕ್ಕೆ ಬಂದರು. ಕೋಚ್‌ ಅನಿತಾ ಚಾನು ಅವರಿಂದ ಮೀರಾಬಾಯಿ ವೇಟ್‌ಲಿಫ್ಟಿಂಗ್‌ನ ಮೊದಲ ಪಾಠಗಳು ಕಲಿತರು. ಅಕಾಡೆಮಿಗೆ ತೆರಳಲು ನಿತ್ಯ 22 ಕಿ.ಮೀ ಪ್ರಯಾಣಿಸುತ್ತಿದ್ದ ಮೀರಾಬಾಯಿ, ಮೊದಲ 6 ತಿಂಗಳು ಬಿದಿರಿನ ಟೊಂಗೆಗಳನ್ನು ಎತ್ತಿ ಅಭ್ಯಾಸ ನಡೆಸಿದರು. ಇದರಿಂದ ವೇಟ್‌ಲಿಫ್ಟಿಂಗ್‌ಗೆ ಬೇಕಿರುವ ತಾಂತ್ರಿಕ ಅಂಶಗಳನ್ನು ಕಲಿತರು. 2011ರಲ್ಲಿ ರಾಷ್ಟ್ರೀಯ ಕಿರಿಯರ ಚಾಂಪಿಯನ್‌ ಆದ ಚಾನು, ತಮ್ಮ 19ನೇ ವಯಸ್ಸಿನಲ್ಲಿ 2014ರ ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದರು. ಅಲ್ಲಿಂದ ಅವರ ವೃತ್ತಿಬದುಕಿಗೆ ಹೊಸ ತಿರುವು ದೊರೆಯಿತು.

ಟೋಕಿಯೋ 2020: ಮೀರಾಬಾಯಿ ಚಾನುಗೆ 1 ಕೋಟಿ, ಕೋಚ್‌ಗೆ 10 ಲಕ್ಷ ರೂ ಬಹುಮಾನ..!

2016ರಲ್ಲಿ ಕಣ್ಣೀರು, 2021ರಲ್ಲಿ ಸಂಭ್ರಮ!

ಮೀರಾಬಾಯಿ ಚಾನು ಒಲಿಂಪಿಕ್ಸ್‌ ಹಾದಿ ಬಹಳ ರೋಚಕವಾಗಿದೆ. ಛಲ, ದಿಟ್ಟತನ, ಪರಿಶ್ರಮ ಅವರ ಕೈಹಿಡಿದಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಾನು ವೈಫಲ್ಯ ಕಂಡಿದ್ದರು. ಸ್ಪರ್ಧೆಯಲ್ಲಿ ನಡೆಸಿದ 6 ಪ್ರಯತ್ನಗಳಲ್ಲಿ ಕೇವಲ 1ರಲ್ಲಿ ಮಾತ್ರ ಅವರು ಯಶಸ್ಸು ಕಂಡಿದ್ದರು. ಈ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿದ್ದರು. ಆದರೆ ರಿಯೋನಲ್ಲೇ ಟೋಕಿಯೋ ಪದಕಕ್ಕೆ ಸಿದ್ಧತೆ ಆರಂಭಿಸಿದ್ದರು. 2017ರಲ್ಲಿ ವಿಶ್ವ ಚಾಂಪಿಯನ್‌ ಆದ ಚಾನು, 2018ರಲ್ಲಿ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿಕೊಂಡರು. 2021ರಲ್ಲಿ ಒಲಿಂಪಿಕ್ಸ್‌ಗೆ ಕೆಲವೇ ದಿನಗಳು ಬಾಕಿ ಇದ್ದಾಗ ಕ್ಲೀನ್‌ ಅಂಡ್‌ ಜರ್ಕ್ ವಿಭಾಗದಲ್ಲಿ ವಿಶ್ವ ದಾಖಲೆ ಬರೆದ ಚಾನು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ.