ಟೋಕಿಯೋ 2020: ಇಂದು ಕಂಚು ಗೆದ್ದು ಇತಿಹಾಸ ರಚಿಸುತ್ತಾ ಮಹಿಳಾ ಹಾಕಿ ತಂಡ?
* ಕಂಚಿನ ಪದಕಕ್ಕಾಗಿ ಭಾರತ ಮಹಿಳಾ ಹಾಕಿ ತಂಡ ಸೆಣಸಾಟ
* ಕಂಚು ಗೆದ್ದು ಇತಿಹಾಸ ಬರೆಯಲು ಗ್ರೇಟ್ ಬ್ರಿಟನ್ ಎದುರು ಫೈಟ್
* ರಾಣಿ ರಾಂಪಲ್ ಪಡೆ ಇತಿಹಾಸ ನಿರ್ಮಿಸಲು ಸಜ್ಜು
ಟೋಕಿಯೋ(ಆ.06): ಭಾರತ ಪುರುಷರ ಹಾಕಿ ತಂಡದ ಗೆಲುವಿನಿಂದ ಸ್ಫೂರ್ತಿ ಪಡೆದಿರುವ ಭಾರತ ಮಹಿಳಾ ತಂಡ, ಶುಕ್ರವಾರ ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣಸಲಿದೆ. ಎಲ್ಲಾ ನಿರೀಕ್ಷೆಗಳನ್ನು ಮೀರಿದ ಪ್ರದರ್ಶನಗಳನ್ನು ತೋರಿರುವ ರಾಣಿ ರಾಂಪಾಲ್ ಪಡೆ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಗೆಲ್ಲಲು ಕಾತರಿಸುತ್ತಿದೆ.
ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್ ಬ್ರಿಟನ್ ವಿರುದ್ಧ ಗೆಲ್ಲುವುದು ಅಂದುಕೊಂಡಷ್ಟುಸುಲಭವಲ್ಲ. ಗುಂಪು ಹಂತದ ಪಂದ್ಯದಲ್ಲಿ ಭಾರತ 1-4 ಗೋಲುಗಳಲ್ಲಿ ಪರಭಾವಗೊಂಡಿತ್ತು. ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಬ್ರಿಟನ್ ಕೊನೆ ಪಕ್ಷ ಕಂಚನ್ನಾದರೂ ಗೆದ್ದು ತವರಿಗೆ ಹಿಂದಿರುಗಲು ಕಾಯುತ್ತಿದೆ.
ಟೋಕಿಯೋ ಒಲಿಂಪಿಕ್ಸ್: ಪುರುಷ & ಮಹಿಳಾ ಹಾಕಿ ತಂಡಕ್ಕೆ ಫ್ಯಾನ್ಸ್ ಫಿದಾ..!
ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಪ್ರೇಲಿಯಾ, ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಉತ್ತಮ ಪ್ರದರ್ಶನ ತೋರಿತ್ತು. ಡಿಫೆಂಡರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಭಾರತ ಗೆಲ್ಲುವ ಸಾಧ್ಯತೆಗಳು ಹೆಚ್ಚಿರಲಿವೆ. ಶುಕ್ರವಾರ ಫೈನಲ್ ಪಂದ್ಯವೂ ನಡೆಯಲಿದ್ದು, ಚಿನ್ನಕ್ಕಾಗಿ ಅರ್ಜೆಂಟೀನಾ ಹಾಗೂ ನೆದರ್‌ಲೆಂಡ್ಸ್ ಸೆಣಸಲಿವೆ.