ಟೋಕಿಯೋ 2020: ರಕ್ತ ಜಿನುಗುತ್ತಿದ್ದರೂ ಛಲದಿಂದ ಹೋರಾಡಿ ಸೋತ ಸತೀಶ್ ಕುಮಾರ್..!
* ಸೂಪರ್ ಹೆವಿವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಸತೀಶ್ ಕುಮಾರ್ ಹೋರಾಟ ಅಂತ್ಯ
* ವಿಶ್ವ ನಂ.1 ಬಾಕ್ಸರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಸೋತ ಸತೀಶ್
* ಉಜ್ಬೇಕಿಸ್ತಾನದ ವಿಶ್ವ ನಂ.1 ಬಾಕ್ಸರ್ ಬಖೋದಿರ್ ಜಲೊಲೌ 5-0 ಅಂತರದಲ್ಲಿ ಸೋಲು
ಟೋಕಿಯೋ(ಆ.01): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಸೂಪರ್ ಹೆವಿವೇಟ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್ ಹೋರಾಟ ಅಂತ್ಯವಾಗಿದೆ. ಉಜ್ಬೇಕಿಸ್ತಾನದ ವಿಶ್ವ ನಂ.1 ಬಾಕ್ಸರ್ ಬಖೋದಿರ್ ಜಲೊಲೌ ಎದುರು ಕೆಚ್ಚೆದೆಯ ಹೋರಾಟ ನಡೆಸಿಯೂ 5-0 ಅಂಕಗಳ ಅಂತರದಲ್ಲಿ ಸತೀಶ್ ಸೋಲು ಕಂಡಿದ್ದಾರೆ. ಇದರೊಂದಿಗೆ ಬಾಕ್ಸಿಂಗ್‌ನಲ್ಲಿ ಭಾರತದ ಪುರುಷ ಸ್ಪರ್ಧಿಗಳ ಹೋರಾಟ ಅಂತ್ಯವಾಗಿದೆ
ಜಮೈಕಾದ ರಿಕಾರ್ಡೊ ಬ್ರೌನ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸಿ ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಸತೀಶ್ ಕುಮಾರ್‌ಗೆ ಪ್ರಬಲ ಪೈಪೋಟಿ ಎದುರಾಯಿತು. ಈ ಹಿಂದಿನ ಎರಡು ಮುಖಾಮುಖಿಯಲ್ಲಿಯೂ ಉಜ್ಬೇಕಿಸ್ತಾನದ ಬಾಕ್ಸರ್‌ಗೆ ಶರಣಾಗಿದ್ದ ಸತೀಶ್ ಮತ್ತೊಮ್ಮೆ ಸೋಲು ಕಾಣಬೇಕಾಯಿತು. ಮೊದಲ ಸುತ್ತಿನಿಂದಲೇ ಉಬ್ಬೇಕಿಸ್ತಾನದ ಬಖೋದಿರ್ ಜಲೊಲೌ ಭಾರತದ ಬಾಕ್ಸರ್ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನಲ್ಲಿ ಐವರು ಜಡ್ಜ್‌ಗಳು ಬಖೋದಿರ್ ಜಲೊಲೌಗೆ ತಲಾ 10 ಅಂಕ ನೀಡಿದರೆ, ಸತೀಶ್ ತಲಾ 9 ಅಂಕಗಳನ್ನು ಪಡೆದರು.
ಇನ್ನು ಎರಡನೇ ಸೆಟ್ ವೇಳೆಯೂ ಬಖೋದಿರ್ ಜಲೊಲೌ ಬಲಿಷ್ಠ ಪಂಚ್‌ಗಳ ಮೂಲಕ ಭಾರತೀಯ ಬಾಕ್ಸರ್ ಸತೀಶ್ ಅವರನ್ನು ತಬ್ಬಿಬ್ಬುಗೊಳಿಸಿದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲೇ ಗಾಯಕ್ಕೊಳಗಾಗಿದ್ದ ಸತೀಶ್ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿ ಮೀರಿ ಯತ್ನಿಸಿದರು. ಆದರೆ ಸತೀಶ್ ಮೇಲುಗೈ ಸಾಧಿಸಲು ಉಜ್ಬೇಕಿಸ್ತಾನದ ವಿಶ್ವ ನಂ.1 ಬಾಕ್ಸರ್ ಅವಕಾಶ ನೀಡಲಿಲ್ಲ. ಒಂದು ಕಡೆ ರಕ್ತ ಜಿನುಗುತ್ತಿದ್ದರೂ ಛಲ ಬಿಡದೇ ಹೋರಾಡುವ ಮೂಲಕ ಸತೀಶ್ ಗಮನ ಸೆಳೆದರು. ಎರಡನೇ ಹಾಗೂ ಮೂರನೇ ಸೆಟ್‌ನಲ್ಲೂ ಉಜ್ಬೇಕಿಸ್ತಾನದ ಬಖೋದಿರ್ ಜಲೊಲೌ 10-9 ಅಂಕಗಳ ಮುನ್ನಡೆ ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಇದರ ಜತೆಗೆ ಒಲಿಂಪಿಕ್ಸ್ ಪದಕವನ್ನೂ ಖಚಿತಪಡಿಸಿಕೊಂಡರು.