ಟೋಕಿಯೋ 2020: ಗುರಿ ತಪ್ಪದ ದೀಪಿಕಾ ಕುಮಾರಿ 16ರ ಘಟ್ಟಕ್ಕೆ ಲಗ್ಗೆ
* ಪ್ರೀಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಆರ್ಚರಿ ಪಟು ದೀಪಿಕಾ ಕುಮಾರಿ
* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ದೀಪಿಕಾ
* ಅಮೆರಿಕ ಆಟಗಾರ್ತಿ ಎದುರು ದೀಪಿಕಾಗೆ ಭರ್ಜರಿ ಜಯ
ಟೋಕಿಯೋ(ಜು.28): ನಂ.1 ಆರ್ಚರಿ ಪಟು, ಭಾರತದ ಪದಕದ ಭರವಸೆ ಎನಿಸಿರುವ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.
32ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಅಮೆರಿಕದ ಜೆನಿಫರ್ ಫರ್ನಾಂಡೀಸ್ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ 16ರ ಘಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಆಟಗಾರ್ತಿ ಎದುರು ನಿರ್ಣಾಯಕ ಸೆಟ್‌ನಲ್ಲಿ ಅನುಭವಿ ಪ್ರದರ್ಶನ ತೋರಿ 6-4 ಅಂತರದಲ್ಲಿ ಗೆಲುವು ಸಾಧಿಸಿದರು.
ಮೊದಲ ಸೆಟ್‌ನಲ್ಲಿ ದೀಪಿಕಾ ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲವಾದರು. ಹೀಗಾಗಿ ಮೊದಲ ಸೆಟ್ ಅನ್ನು ಜೆನಿಫರ್ 26-25 ಪಾಯಿಂಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ 18 ವರ್ಷದ ಆಟಗಾರ್ತಿ 2-0 ಮುನ್ನಡೆ ಸಾಧಿಸಿದರು. ಇನ್ನು ಎರಡನೇ ಸೆಟ್‌ನಲ್ಲಿ ಎಚ್ಚೆತ್ತುಕೊಂಡ ದೀಪಿಕಾ 28-25 ಅಂಕಗಳ ಮುನ್ನಡೆ ಪಡೆದರು. ಇದರೊಂದಿಗೆ ಉಭಯ ಆಟಗಾರ್ತಿಯರು 2-2 ಸಮಬಲ ಸಾಧಿಸಿದರು.
ಟೋಕಿಯೋ 2020: ಭಾರತ ಆರ್ಚರಿ ಪಟುಗಳಿಗೆ ಇಂದು ಕೊನೆಯ ಅವಕಾಶ
ಇನ್ನು ಮೂರನೇ ಸೆಟ್‌ನಲ್ಲೂ ಪ್ರಾಬಲ್ಯ ಮೆರೆದ ದೀಪಿಕಾ 27-25 ಅಂಕಗಳಲ್ಲಿ ಗೆಲುವು ಸಾಧಿಸುವ ಮೂಲಕ 4-2ರ ಮುನ್ನಡೆ ಸಾಧಿಸಿದರು. ಆದರೆ ನಾಲ್ಕನೇ ಸೆಟ್‌ನಲ್ಲಿ ದೀಪಿಕಾ ಕೊಂಚ ಯಾಮಾರಿದ್ದರಿಂದ ಅಮೆರಿಕದ ಜೆನಿಫರ್ 25-24 ಅಂತರದಲ್ಲಿ ಗೆದ್ದು 4-4ರ ಸಮಬಲ ಸಾಧಿಸಿದರು. ಇನ್ನು ನಿರ್ಣಾಯಕ ಸೆಟ್‌ನಲ್ಲಿ ದೀಪಿಕಾ 26-24 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಅಂತಿಮ 16ರ ಘಟ್ಟಕ್ಕೇರಿದ್ದಾರೆ.
ಇದಕ್ಕೂ ಮೊದಲು 64ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಭೂತಾನ್‌ನ ಆರ್ಚರ್ ಕರ್ಮಾ ಎದುರು 6-0 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿ 16ರ ಸುತ್ತು ಪ್ರವೇಶಿಸಿದ್ದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ತರುಣ್‌ದೀಪ್ ರೈ ಹಾಗೂ ಪ್ರವೀಣ್ ಜಾಧವ್ ಮೊದಲ ಪಂದ್ಯವನ್ನು ಜಯಿಸಿದರಾದರೂ, 32 ಸುತ್ತಿನ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದರು.