ಟೋಕಿಯೋ 2020: ಪದಕ ಕೊಳ್ಳೆ ಹೊಡೆದ ಅಮೆರಿಕ, ಚೀನಾ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಅಧಿಕೃತವಾಗಿ ಮುಕ್ತಾಯ
* ಪದಕಗಳ ಬೇಟೆಯಾಡಿದ ಅಮೆರಿಕ, ಚೀನಾ
* ಪದಕ ಗಳಿಕೆಯಲ್ಲಿ ಅಮೆರಿಕಗೆ ಮೊದಲ ಸ್ಥಾನ
ಟೋಕಿಯೋ(ಆ.09): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ಅಪ್ರತಿಮ ಸಾಧನೆಯನ್ನು ಮುಂದುವರೆಸಿರುವ ಅಮೆರಿಕ, ಟೋಕಿಯೋದಲ್ಲೂ 39 ಚಿನ್ನ, 41 ಬೆಳ್ಳಿ ಮತ್ತು 33 ಕಂಚಿನ ಪದಕ ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನು 38 ಚಿನ್ನ, 32 ಬೆಳ್ಳಿ, 18 ಕಂಚಿನ ಪದಕಗಳ ಮೂಲಕ ಚೀನಾ 2ನೇ ಸ್ಥಾನ, 27 ಚಿನ್ನ, 14 ಬೆಳ್ಳಿ, 17 ಕಂಚಿನ ಪದಕಗಳ ಮೂಲಕ ಆತಿಥೇಯ ಜಪಾನ್ ಮೂರನೇ ಸ್ಥಾನ ಪಡೆದುಕೊಂಡಿದೆ. ಭಾರತ 7 ಪದಕಗಳೊಂದಿಗೆ 48ನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಕಳೆದ ರಿಯೋ ಒಲಿಂಪಿಕ್ಸ್‌ಗೆ ಹೋಲಿಸಿದರೆ ಚಿನ್ನ ಮತ್ತು ಒಟ್ಟಾರೆ ಪದಕ ಪದಕದಲ್ಲಿ ಅಮೆರಿಕ ಹಿನ್ನಡೆ ಅನುಭವಿಸಿದೆ. 2016ರಲ್ಲಿ ಅಮೆರಿಕದ 46 ಚಿನ್ನ, 37 ಬೆಳ್ಳಿ, 38 ಕಂಚಿನೊಂದಿಗೆ 121 ಪದಕ ಗೆದ್ದಿತ್ತು. ಆದರೆ ಚೀನಾ ರಿಯೋದಲ್ಲಿ 27 ಚಿನ್ನ, 23 ಬೆಳ್ಳಿ, 17 ಕಂಚು ಮಾತ್ರ ಗೆದ್ದಿತ್ತು. ಇನ್ನು ಜಪಾನ್ 12 ಚಿನ್ನ, 8 ಬೆಳ್ಳಿ, 21 ಕಂಚಿನ ಪದಕ ಗೆದ್ದುಕೊಂಡಿತ್ತು.
ಸಯೊನಾರ ಟೋಕಿಯೋ; ಒಲಿಂಪಿಕ್ಸ್‌ಗೆ ಅಧಿಕೃತ ತೆರೆ
ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ
ಭಾರತವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 7 ಪದಕಗಳನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿದೆ. ಈ ಮೂಲಕ ಈವರೆಗಿನ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. 2016ರ ರಿಯೋ ಒಲಂಪಿಕ್ಸ್‌ನಲ್ಲಿ 1 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಭಾರತ 67ನೇ ಸ್ಥಾನದಲ್ಲಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 2 ಬೆಳ್ಳಿ, 4 ಕಂಚಿನ ಪದಕದೊಂದಿಗೆ 57ನೇ ಸ್ಥಾನ ಗಳಿಸಿತ್ತು.
ಅತಿ ಹೆಚ್ಚು ಪದಕ ವಿಜೇತರು
ಪುರುಷ: ಕೇಲಬ್ ಡ್ರೆಸೆಲ್ (ಅಮೆರಿಕ) - 5 ಚಿನ್ನ
ಮಹಿಳೆ: ಎಮ್ಮಾ ಮೆಕಾನ್ (ಆಸ್ಪ್ರೇಲಿಯ)- 4 ಚಿನ್ನ, 3 ಕಂಚು
ಟೋಕಿಯೋ ಒಲಿಂಪಿಕ್ಸ್ 2021 ಪದಕ ಪಟ್ಟಿ
ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಅಮೆರಿಕ 39 41 33 113
ಚೀನಾ 38 32 18 88
ಜಪಾನ್ 27 14 17 58
ಬ್ರಿಟನ್ 22 21 22 65
ರಷ್ಯಾ 20 28 23 71