Asianet Suvarna News Asianet Suvarna News

ಸಿದ್ದಿ ಯುವಕರನ್ನು ಒಲಿಂಪಿಕ್ಸ್‌ಗೆ ಕಳುಹಿಸಲು ಕ್ರೀಡಾ ಇಲಾಖೆ ಸಿದ್ಧತೆ

  • ರಾಜ್ಯದ ಸಿದ್ದಿ ಜನಾಂಗದ 24 ಯುವ ಕ್ರೀಡಾ ಪ್ರತಿಭೆಗಳನ್ನು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕಳುಹಿಸಿಕೊಡಲು
  •  24 ಮಂದಿ ಕ್ರೀಡಾಪಟುಗಳೊಂದಿಗೆ ಬುಧವಾರ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಸಂವಾದ
Sports department prepares siddi youth for Olympics snr
Author
Bengaluru, First Published Sep 9, 2021, 9:42 AM IST

 ಬೆಂಗಳೂರು (ಸೆ.09):  ರಾಜ್ಯದ ಸಿದ್ದಿ ಜನಾಂಗದ 24 ಯುವ ಕ್ರೀಡಾ ಪ್ರತಿಭೆಗಳನ್ನು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕಳುಹಿಸಿಕೊಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿದ್ಧತೆ ನಡೆಸಿದ್ದು, 24 ಮಂದಿ ಕ್ರೀಡಾಪಟುಗಳೊಂದಿಗೆ ಬುಧವಾರ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಮುಂದಿನ ಒಲಿಂಪಿಕ್ಸ್‌ ಗಮನದಲ್ಲಿ ಇಟ್ಟುಕೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಕ್ರೀಡಾ ಪ್ರತಿಭಾನ್ವೇಷಣೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕರ್ನಾಟಕದ ಕ್ರೀಡಾಪಟುಗಳನ್ನು ಗುರುತಿಸಲು ಉನ್ನತ ಸಮಿತಿ

ಇವರಲ್ಲಿ ಯಾವ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಸಾಮರ್ಥ್ಯವಿದೆ ಎನ್ನುವುದನ್ನು ಗುರುತಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುವುದು. ರಾಜ್ಯದ ಪ್ರತಿಷ್ಠಿತ ವಿದ್ಯಾನಗರ ಹಾಗೂ ವಿವಿದೆಡೆ ಇರುವ ಕ್ರೀಡಾ ವಸತಿ ನಿಲಯದಲ್ಲಿ ಈ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ರೀತಿಯ ಪರೀಕ್ಷೆ ನಡೆಸದೆ ನೇರವಾಗಿ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗುವುದು ಎಂದು ಹೇಳಿದರು. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಕ್ರೀಡಾ ಇಲಾಖೆ ಆಯುಕ್ತ ವೆಂಕಟೇಶ್‌ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

1,666 ದೈಹಿಕ ಶಿಕ್ಷಕರಿಗೆ ತರಬೇತಿ:  ತಳಮಟ್ಟದಿಂದಲೇ ಕ್ರೀಡಾಪಟುಗಳನ್ನು ತಯಾರು ಮಾಡಲು 1666 ದೈಹಿಕ ಶಿಕ್ಷಕರಿಗೆ ಗುಣಮಟ್ಟದ ವೈಜ್ಞಾನಿಕ ತರಬೇತಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಈಗಾಗಲೆ ವಿವಿಧ ಯೋಜನೆ ಜಾರಿಗೆ ತಂದಿದೆ. ಅದಕ್ಕಿಂತ ಮುಖ್ಯವಾಗಿ ತಳಮಟ್ಟದಲ್ಲೇ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಲು ದೈಹಿಕ ಶಿಕ್ಷರಿಗೇ ಕ್ರೀಡಾ ಇಲಾಖೆಯಿಂದ ವೈಜ್ಞಾನಿಕ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಈಗಾಗಲೆ 1666 ದೈಹಿಕ ಶಿಕ್ಷಕರ ಪಟ್ಟಿಪಡೆಯಲಾಗಿದ್ದು, ತಿಂಗಳಾಂತ್ಯದಲ್ಲಿ ಕ್ರೀಡಾ ಇಲಾಖೆಯಿಂದ ತರಬೇತಿ ನೀಡಲು ಆರಂಭಿಸಲಾಗುವುದು.

ಬೆಂಗಳೂರಿನಲ್ಲಿ ನಡೆದ ಇಲಾಖೆ ಸಭೆಯಲ್ಲಿ ವಿಡಿಯೋ ಸಂವಾದದ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹಳಿಯಾಳ, ಯಲ್ಲಾಪುರ, ಮುಂಡಗೋಡ್‌ ತಾಲೂಕಿನ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ ಉನ್ನತ ತರಬೇತಿಗೆ ಚಾಲನೆ ನೀಡಿದರು.

Follow Us:
Download App:
  • android
  • ios