ಸೈನಾ ನೆಹ್ವಾಲ್, ಶ್ರೀಕಾಂತ್‌ ಒಲಿಂಪಿಕ್‌ ಕನಸು ಭಗ್ನ?

* ಕೋವಿಡ್ ಭೀತಿಯಿಂದಾಗಿ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ರದ್ದು

* ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕಡೆಯ ಅವಕಾಶವಾಗಿತ್ತು.

* ಬಿಡಬ್ಲ್ಯುಎಫ್‌ ಒಂದು ವೇಳೆ ಅರ್ಹತಾ ಮಾನದಂಡವನ್ನು ಪರಿಷ್ಕರಿಸಿದರೆ ಮಾತ್ರ ಈ ಇಬ್ಬರಿಗೆ ಅವಕಾಶ 

Singapore Open Badminton Tourney cancelled Saina Nehwal Kidambi Srikanth to miss Tokyo Olympics kvn

ನವದೆಹಲಿ(ಮೇ.14): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ರ ಟೋಕಿಯೋ ಒಲಿಂಪಿಕ್ಸ್‌ ಕನಸು ಬಹುತೇಕ ಭಗ್ನಗೊಂಡಿದೆ. 

ಈ ಇಬ್ಬರಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿಂಗಾಪುರ ಓಪನ್‌ ಕೊನೆಯ ಅವಕಾಶವಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಟೂರ್ನಿ ರದ್ದಾಗಿದೆ. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೆಡರೇಷನ್‌(ಬಿಡಬ್ಲ್ಯುಎಫ್‌) ಒಂದು ವೇಳೆ ಅರ್ಹತಾ ಮಾನದಂಡವನ್ನು ಪರಿಷ್ಕರಿಸಿದರೆ ಸೈನಾ ಹಾಗೂ ಶ್ರೀಕಾಂತ್‌ ಟೋಕಿಯೋಗೆ ತೆರಳುವ ಅವಕಾಶ ಪಡೆಯಲಿದ್ದಾರೆ.

ಸಹಜವಾಗಿಯೇ ಅರ್ಹತೆ ಪಡೆಯದಿರುವುದಕ್ಕೆ ಬೇಸರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಲು ಸಾಧ್ಯ ಹೇಳಿ. ಈಗಾಗಲೇ ಐದರಿಂದ ಆರು ಟೂರ್ನಿಗಳು ರದ್ದಾಗಿವೆ. ಹೀಗಾಗಿ ಬಿಡಬ್ಲ್ಯುಎಫ್ ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಕಿದಂಬಿ ಶ್ರೀಕಾಂತ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಮಲೇಷ್ಯಾ ಓಪನ್‌ ಮುಂದಕ್ಕೆ: ಒಲಿಂಪಿಕ್ಸ್ ಕನವರಿಕೆಯಲ್ಲಿದ್ದ ಸೈನಾ, ಶ್ರೀಕಾಂತ್‌ಗೆ ಶಾಕ್

ಟೋಕಿಯೋ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿರುವ ಸೈನಾ ನೆಹ್ವಾಲ್ 22ನೇ ರ‍್ಯಾಂಕಿಂಗ್‌ ಹೊಂದಿದ್ದರೆ, ಕಿದಂಬಿ ಶ್ರೀಕಾಂತ್ 20ನೇ ರ‍್ಯಾಂಕಿಂಗ್‌ನಲ್ಲಿದ್ದಾರೆ. ಅಗ್ರ 16ರ ರ‍್ಯಾಂಕಿಂಗ್‌ನೊಳಗೆ ಸ್ಥಾನ ಪಡೆದವರು ನೇರವಾಗಿ ಟೋಕಿಯೋ ಒಲಿಂಪಿಕ್ಸ್‌ಗೆ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ. ಈಗಾಗಲೇ ಭಾರತದಿಂದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ ಸಾಯಿ ಪ್ರಣೀತ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್-ಚಿರಾಗ್ ಶೆಟ್ಟಿ ಅರ್ಹತೆ ಪಡೆದಿದೆ.

ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೈನಾ ಪಾಲ್ಗೊಂಡಿದ್ದರಾದರೂ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios