* ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನ* ಗ್ರೇಟ್‌ ಬ್ರಿಟನ್ ಎದುರು ರೋಚಕ ಸೋಲು ಕಂಡ ರಾಣಿ ರಾಂಪಾಲ್ ಪಡೆ* ಮಹಿಳಾ ಹಾಕಿ ತಂಡದ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ(ಆ.06): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ಗೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಕಂಚಿನ ಪದಕ ಗೆಲ್ಲುವ ಹಾದಿಯಲ್ಲಿ ಮುಗ್ಗರಿಸಿದೆ. ಗ್ರೇಟ್‌ ಬ್ರಿಟನ್ ಎದುರು ನಡೆದ ಪಂದ್ಯದಲ್ಲಿ ರಾಣಿ ಪಡೆ 4-3 ಗೋಲುಗಳ ಅಂತರದಲ್ಲಿ ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಒಲಿಂಪಿಕ್ಸ್‌ ಪದಕ ಗೆಲ್ಲುವ ಮಹಿಳಾ ಹಾಕಿ ತಂಡದ ಕನಸು ಭಗ್ನವಾಗಿದೆ.

ಭಾರತದ ಆಟಗಾರರ ಸೋಲು-ಗೆಲುವುಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ದೇಶದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡುವ ಸೋಲಿನಲ್ಲೂ ತಾವು ಜತೆಗಿರುವ ಸಂದೇಶವನ್ನು ಸಾರಿದ್ದಾರೆ. ಹೌದು, ಗ್ರೇಟ್‌ ಬ್ರಿಟನ್ ಎದುರು ರಾಣಿ ಪಡೆ ಮುಗ್ಗರಿಸುತ್ತಿದ್ದಂತೆಯೇ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೊಂಚದರಲ್ಲೇ ನಾವು ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆವು. ಆದರೆ ಮಹಿಳಾ ತಂಡದ ಈ ಪ್ರದರ್ಶನ ಹೊಸ ಭಾರತವನ್ನು ಪ್ರತಿಬಿಂಬಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ಟೋಕಿಯೋ ಒಲಿಂಪಿಕ್ಸ್‌ ಮಹಿಳಾ ತಂಡದ ದಿಟ್ಟ ಪ್ರದರ್ಶನ, ದೇಶದ ಯುವ ಸಹೋದರಿಯರಿಗೆ ಸ್ಪೂರ್ತಿಯಾಗಲಿದೆ. ಈ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಟೋಕಿಯೋ 2020: ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ..!

Scroll to load tweet…

ಗುರುವಾರವಷ್ಟೇ ಭಾರತೀಯ ಪುರುಷರ ಹಾಕಿ ತಂಡವು ಕಂಚಿನ ಪದಕದ ಕಾದಾಟದಲ್ಲಿ ಜರ್ಮನಿ ಎದುರು 5-4 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಕಂಚಿನ ಪದಕ ಜಯಿಸಿದ ಸಾಧನೆ ಮಾಡಿತ್ತು. ಇದರ ಬೆನ್ನಲ್ಲೇ ರಾಣಿ ರಾಂಪಾಲ್ ಪಡೆ ಕೂಡಾ ಕಂಚಿನ ಪದಕ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಗ್ರೇಟ್‌ ಬ್ರಿಟನ್ ಹಾಗೂ ಭಾರತ ಮಹಿಳಾ ಹಾಕಿ ತಂಡಗಳ ನಡುವಿನ ಪಂದ್ಯ ಹಾಕಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಮೊದಲಾರ್ಧ ಮುಕ್ತಾಯದ ವೇಳೆ ಉಭಯ ತಂಡಗಳು 3-3 ಗೋಲುಗಳ ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಬ್ರಿಟನ್‌ ದಾಖಲಿಸಿದ ಒಂದು ಗೋಲು ಕಂಚಿನ ಪದಕ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್‌ ಬ್ರಿಟನ್ ಪಾಲಾಗುವಂತೆ ಮಾಡಿತು.