ಟೋಕಿಯೋ 2020: ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ..!
* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದ ರಾಣಿ ರಾಂಪಾಲ್ ಪಡೆ
* ಗ್ರೇಟ್ ಬ್ರಿಟನ್ ಎದುರು 4-3 ಗೋಲುಗಳಿಂದ ಸೋಲು ಅನುಭವಿಸಿದ ಭಾರತ ಮಹಿಳಾ ಹಾಕಿ ತಂಡ
* ಕೆಚ್ಚೆದೆಯ ಹೋರಾಟದ ಮೂಲಕ ಭಾರತೀಯರ ಮನಗೆದ್ದ ರಾಣಿ ಪಡೆ
ಟೋಕಿಯೋ(ಆ.06): ರಿಯೋ ಒಲಿಂಪಿಕ್ಸ್ ಚಾಂಪಿಯನ್ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡದ ಎದುರು ರಾಣಿ ರಾಂಪಾಲ್ ಪಡೆ 3-4 ಗೋಲುಗಳ ರೋಚಕ ಸೋಲು ಕಂಡಿದೆ. ಕೊನೆಯ ಕ್ಷಣದವರೆಗೂ ಛಲದಿಂದ ಹೋರಾಡಿದ ಭಾರತ ಮಹಿಳಾ ತಂಡವು ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ರಾಣಿ ರಾಂಪಾಲ್ ಪಡೆ ಪದಕ ಗೆಲ್ಲದಿದ್ದರೂ ಭಾರತೀಯರ ಹೃದಯ ಗೆದ್ದರು ಎಂದರೆ ಅತಿಶಯೋಕ್ತಿಯಾಗಲಾರದು.
ಲೀಗ್ ಹಂತದಲ್ಲಿ ಗ್ರೇಟ್ ಬ್ರಿಟನ್ ಎದುರು 4-1 ಗೋಲುಗಳ ಅಂತರದಲ್ಲಿ ಶರಣಾಗಿದ್ದ ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಮೊದಲ ಕ್ವಾರ್ಟರ್‌ನ ಆರಂಭದಲ್ಲೇ ಗ್ರೇಟ್ ಬ್ರಿಟನ್‌ಗೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಲು ಅವಕಾಶ ಸಿಕ್ಕಿತಾದರೂ, ಭಾರತದ ಗೋಲು ಕೀಪರ್ ಸವಿತಾ ಪೂನಿಯಾ ಅದನ್ನು ವಿಫಲಗೊಳಿಸಿದರು. ಮತ್ತೆ 10ನೇ ನಿಮಿಷದಲ್ಲಿ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರು, ಅದನ್ನು ಗೋಲಾಗಿ ಪರಿವರ್ತಿಸಲು ಬ್ರಿಟನ್‌ಗೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌ನಲ್ಲೇ ಒಟ್ಟಾರೆ ಮೂರು ಗೋಲು ಬಾರಿಸುವ ಅವಕಾಶ ಸಿಕ್ಕರು ಬ್ರಿಟನ್ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಇನ್ನು ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಭಾರತದ ದೀಪ್ ಗ್ರೇಸ್ ಎಕ್ಕಾ ಮಾಡಿದ ಎಡವಟ್ಟಿನಿಂದಾಗಿ ಹೆನ್ನಾ ಮಾರ್ಟಿನ್ ಗೋಲು ಬಾರಿಸಿ ಬ್ರಿಟನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದಾದ ಮರು ನಿಮಿಷದಲ್ಲಿ ಬ್ರಿಟನ್‌ಗೆ ಮತ್ತೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಯಶಸ್ವಿಯಾಗಲಿಲ್ಲ. ಇನ್ನು 19ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತಾದರೂ ಸರಿಯಾಗಿ ಕಾರ್ಯಗತಗೊಳಿಸದ ಕಾರಣ ವಿಫಲವಾಯಿತು. ಇನ್ನು 23ನೇ ನಿಮಿಷದಲ್ಲಿ ಸಾರಾ ರಾಬರ್ಟ್‌ಸನ್ ಆಕರ್ಷಕ ಗೋಲು ಬಾರಿಸುವ ಮೂಲಕ ಬ್ರಿಟನ್‌ಗೆ 2-0 ಮುನ್ನಡೆ ಒದಗಿಸಿಕೊಟ್ಟರು. ಇದಾದ ಬಳಿಕ ಎರಡನೇ ಕ್ವಾರ್ಟರ್‌ನ ಕೊನೆಯ ಕೆಲ ನಿಮಿಷಗಳಲ್ಲಿ ಆಕ್ರಮಣಕಾರಿ ರಣತಂತ್ರ ರೂಪಿಸಿಕೊಂಡ ರಾಣಿ ಪಡೆಗೆ ಗುರ್ಜಿತ್ ಕೌರ್ ಪೆನಾಲ್ಟಿನಲ್ಲಿ ಗೋಲು ಬಾರಿಸಿ ಭಾರತ ಪರ ಗೋಲುಗಳ ಖಾತೆ ತೆರೆದರು. ಮರು ನಿಮಿಷದಲ್ಲೆ ಗುರ್ಜಿತ್ ಕೌರ್ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವ 2-2ರ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಮೊದಲಾರ್ಧ ಮುಕ್ತಾಯಕ್ಕೆ ಕೊನೆಯ ಎರಡು ನಿಮಿಷಗಳು ಬಾಕಿ ಇದ್ದಾಗ ವಂದನಾ ಕಟಾರಿಯಾ ಗೋಲು ಬಾರಿಸಿ ಭಾರತಕ್ಕೆ 3-2 ಗೋಲುಗಳ ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 3-2ರ ಮುನ್ನಡೆ ಕಾಯ್ದುಕೊಂಡಿತ್ತು.
ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಬ್ರಿಟನ್ ನಾಯಕಿ ಹೋಲಿ ವೆಬ್ ಗೋಲು ಬಾರಿಸುವ ಮೂಲಕ 3-3ರ ಸಮಬಲ ಸಾಧಿಸುವಂತೆ ಮಾಡಿದರು. ಮೂರನೇ ಕ್ವಾರ್ಟರ್‌ನ ಕೊನೆಯ ಸೆಕೆಂಡ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ, ಯಶಸ್ವಿಯಾಗಲಿಲ್ಲ. ಇನ್ನು ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲೇ ಬ್ರಿಟನ್ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡು ಗೋಲು ಬಾರಿಸುವ ಮೂಲಕ 4-3 ಗೋಲುಗಳ ಮುನ್ನಡೆ ಸಾಧಿಸಿತು. ಆ ಬಳಿಕ ರಾಣಿ ಪಡೆ ಗೋಲು ಗಳಿಸಲು ಸಾಕಷ್ಟು ಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ