ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ
* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ 4 ಪದಕ ಗೆದ್ದ ಭಾರತ
* ಪದಕ ಸಾಧಕರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
* ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಅವನಿ ಲೆಖಾರಾ
ನವದೆಹಲಿ(ಆ.30): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ(ಆ.30) ಒಂದು ಚಿನ್ನ ಸೇರಿ ಬರೋಬ್ಬರಿ 4 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಪದಕ ಗೆದ್ದ ಭಾರತೀಯ ಪ್ಯಾರಾಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
10 ಮೀಟರ್ ಏರ್ ರೈಫಲ್ ಸ್ಪರ್ಧೆ ಅವನಿ ಲೆಖಾರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಥ್ಲೀಟ್ ಎನ್ನುವ ದಾಖಲೆಗೆ ಅವನಿ ಪಾತ್ರರಾಗಿದ್ದರು. ಅವನಿ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಈ ಗೆಲುವು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಅವನಿಯನ್ನು ಅಭಿನಂದಿಸಿದ್ದಾರೆ. ಇಡೀ ದೇಶವೇ ತಮ್ಮನ್ನು ಬೆಂಬಲಿಸಿದ್ದಕ್ಕೆ ಅವನಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇನ್ನು ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಜಯಿಸಿದ ಪ್ಯಾರಾಥ್ಲೀಟ್ ಯೋಗೇಶ್ ಕಥುನಿಯಾಗೆ ಟೆಲಿಫೋನ್ ಕರೆ ಮಾಡಿದ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಯೋಗೇಶ್ ಯಶಸ್ಸಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ ಯೋಗೇಶ್ ತಾಯಿಯ ಸಹಕಾರವನ್ನು ಮೋದಿ ಸ್ಮರಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಗೇಶ್ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ಯಾರಾಲಿಂಪಿಕ್ಸ್: ಜಾವೆಲಿನ್‌ನಲ್ಲಿ ಮತ್ತೆರಡು ಪದಕ ಗೆದ್ದ ಝಝಾರಿಯಾ, ಸುಂದರ್ ಸಿಂಗ್..!
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮೂರನೇ ಪದಕ ಗೆದ್ದ 40 ವರ್ಷದ ಜಾವೆಲಿನ್ ಥ್ರೋ ಪಟು ದೇವೇಂದ್ರ ಝಝಾರಿಯಾ ಹಾಗೂ ಸಂದರ್ ಸಿಂಗ್ ಗುರ್ಜರ್ ಅವರಿಗೂ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 2004ರ ಅಥ್ಲೆನ್ಸ್ ಪ್ಯಾರಾಲಿಂಪಿಕ್ಸ್ ಹಾಗೂ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ದೇವೇಂದ್ರ ಝಝಾರಿಯಾ F-46 ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ಜಾವೆಲಿನ್ ಥ್ರೋ ಮಾಡುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು ಇದೇ ಸ್ಪರ್ಧೆಯಲ್ಲಿ ಸುಂದರ್ ಸಿಂಗ್ ಗುರ್ಜರ್ 64.01 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.ಈ ಇಬ್ಬರು ಸಾಧಕರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ನೀವು ಮಹಾರಾಣಾ ಪ್ರತಾಪ್ ಸಿಂಹನವರ ನಾಡಿನವರು. ಹಾಗಾಗಿ ನೀವು ಈಟಿಯನ್ನು ಚೆನ್ನಾಗಿಯೇ ಎಸೆಯುತ್ತೀರ ಎಂದು ಝಝಾರಿಯಾ ಅವರ ಸಾಧನೆಯನ್ನು ಮೋದಿ ಕೊಂಡಾಡಿದ್ದಾರೆ. ಇನ್ನು ಕಂಚು ಗೆದ್ದ ಜಾವೆಲಿನ್ ಥ್ರೋ ಪಟು, ನೀವಂತೂ ಸುಂದರ ಸಾಧನೆ ಮಾಡಿದ್ದೀರಾ ಎಂದು ಗುರ್ಜರ್ ಸಾಧನೆಯನ್ನು ಬಣ್ಣಿಸಿದ್ದಾರೆ. ಮೋದಿಯವರಿಗೆ ಈ ಇಬ್ಬರು ಪ್ಯಾರಾಥ್ಲೀಟ್‌ಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.