ಪ್ಯಾರಾಲಿಂಪಿಕ್ಸ್: ಜಾವೆಲಿನ್‌ನಲ್ಲಿ ಮತ್ತೆರಡು ಪದಕ ಗೆದ್ದ ಝಝಾರಿಯಾ, ಸುಂದರ್ ಸಿಂಗ್..!
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ದೇವೇಂದ್ರ ಝಝಾರಿಯಾ, ಸುಂದರ್ ಸಿಂಗ್ ಗುರ್ಜರ್
* ಪ್ಯಾರಾಲಿಂಪಿಕ್ಸ್‌ನಲ್ಲಿ 3ನೇ ಪದಕ ಗೆದ್ದ 40 ವರ್ಷದ ಝಝಾರಿಯಾ
* ಜಾವೆಲಿನ್ ಥ್ರೋನಲ್ಲಿ ಗುರ್ಜರ್‌ಗೆ ಒಲಿದ ಕಂಚಿನ ಪದಕ
ಟೋಕಿಯೋ(ಆ.30): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳ ಪದಕ ಬೇಟೆ ಸೋಮವಾರ ಭರ್ಜರಿಯಾಗಿ ಮುಂದುವರೆದಿದ್ದು, F-46 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 40 ವರ್ಷದ ದೇವೇಂದ್ರ ಝಝಾರಿಯಾ ವೈಯುಕ್ತಿಕ ಶ್ರೇಷ್ಠ ಪ್ರದರ್ಶನದೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದರೆ, ಇದೇ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಜಾವೆಲಿನ್ ಥ್ರೋ ಪ್ಯಾರಾಥ್ಲೀಟ್ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಜಯಿಸಿದಂತಾಗಿದೆ.
2004ರ ಅಥ್ಲೆನ್ಸ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಇದೀಗ ಮೂರನೇ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ(ಆ.30)ವಾದ ಇಂದು ನಡೆದ F-46 ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಜಾವೆಲಿನ್ ಥ್ರೋ ಪಟು ಸುಂದರ್ ಸಿಂಗ್ ಗುರ್ಜರ್ 64.01 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಡಬಲ್ ಧಮಾಕಾ, ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಜಯಿಸಿದ ಯೋಗೇಶ್..!
ದೇವೇಂದ್ರ ಮೊದಲೆರಡು ಜಾವೆಲಿನ್ ಥ್ರೋ 60 ಮೀಟರ್ ಆಸುಪಾಸಿನಲ್ಲಿಯೇ ಇತ್ತು. ಆದರೆ ಮೂರನೇ ಪ್ರಯತ್ನದಲ್ಲಿ 64.35 ಮೀಟರ್ ದೂರ ಎಸೆಯುವ ಮೂಲಕ ಪದಕ ಖಚಿತ ಪಡಿಸಿಕೊಂಡರು. ಇನ್ನು ಸುಂದರ್ ಕೂಡಾ ನಿಧಾನ ಆರಂಭವನ್ನು ಪಡೆದರಾದರೂ ಐದನೇ ಪ್ರಯತ್ನದಲ್ಲಿ 64 ಮೀಟರ್ ಗಡಿ ದಾಟುವ ಮೂಲಕ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದೇ ಸ್ಪರ್ಧೆಯಲ್ಲಿ ಶ್ರೀಲಂಕಾದ ದಿನೇಶ್ ಪ್ರಿಯನ್ ಹೆರಾತ್ 67.79 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.