* ಟೋಕಿಯೋ ಒಲಿಂಪಿಕ್ಸ್‌ ಮುಕ್ತಾಯದ ಬಳಿಕ ಎಲ್ಲರ ಚಿತ್ತ ಪ್ಯಾರಿಸ್ ಒಲಿಂಪಿಕ್ಸ್‌ನತ್ತ* 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಜುಲೈ 26ರಿಂದ ಆಗಸ್ಟ್‌ 11ರ ವರೆಗೆ ನಡೆಯಲಿದೆ* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 32 ಕ್ರೀಡೆಗಳಿಂದ 329 ಸ್ಪರ್ಧೆಗಳು ನಡೆಯಲಿದೆ. 

ಪ್ಯಾರಿಸ್(ಆ.09)‌: ಟೋಕಿಯೋ ಒಲಿಂಪಿಕ್ಸ್‌ ಯಶಸ್ವಿಯಾಗಿ ಮುಕ್ತಾಯವಾಗುತ್ತಿದ್ದಂತೆ, ಎಲ್ಲರ ಚಿತ್ತ ಇದೀಗ 2024ರತ್ತ ಹೊರಳಿದೆ. ಪ್ರೇಮಿಗಳ ಸ್ವರ್ಗ ಎಂದೇ ಖ್ಯಾತಿ ಹೊಂದಿರುವ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಮುಂದಿನ ಒಲಿಂಪಿಕ್ಸ್‌ ಆಯೋಜನೆಗೊಂಡಿದ್ದು, ಅಲ್ಲಿ ಭರ್ಜರಿ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ.

2024ರ ಜುಲೈ 26ರಿಂದ ಆಗಸ್ಟ್‌ 11ರ ವರೆಗೆ ಮುಂದಿನ ಅತಿದೊಡ್ಡ ಕ್ರೀಡಾಕೂಟ ನಡೆಯಲಿದೆ. ಒಟ್ಟು 32 ಕ್ರೀಡೆಗಳಿಂದ 329 ಸ್ಪರ್ಧೆಗಳು ನಡೆಯಲಿದೆ. ಅಥ್ಲೀಟ್‌ಗಳ ಸಂಖ್ಯೆಯನ್ನು ಗರಿಷ್ಠ 10,500ಕ್ಕೆ ನಿಗದಿಪಡಿಸಲಾಗಿದೆ.

ಟೋಕಿಯೋ 2020: ಪದಕ ಕೊಳ್ಳೆ ಹೊಡೆದ ಅಮೆರಿಕ, ಚೀನಾ

2015ರಲ್ಲೇ ಫ್ರಾನ್ಸ್‌ ದೇಶವು, 2024ರ ಒಲಿಂಪಿಕ್ಸ್‌ ಆಯೋಜಿಸುವ ಬಿಡ್‌ ಗೆದ್ದುಕೊಂಡಿತ್ತು. ಈ ಮೂಲಕ 3 ಬಾರಿ ಬೇಸಿಗೆ ಒಲಂಪಿಕ್ಸ್‌ ಆಯೋಜಿಸುತ್ತಿರುವ 2ನೇ ದೇಶ ಎಂಬ ಕಿರೀಟವನ್ನು ಅದು ತನ್ನದಾಗಿಸಿಕೊಂಡಿತ್ತು. ಈ ಹಿಂದೆ 1900, 1924ರಲ್ಲಿ ಫ್ರಾನ್ಸ್‌ನಲ್ಲಿ ಕ್ರೀಡಾಕೂಟ ಆಯೋಜನೆಗೊಂಡಿತ್ತು.

2024ರ ಒಲಂಪಿಕ್ಸ್‌ನ ಬಹುತೇಕ ಸ್ಫರ್ಧೆಗಳು ಪ್ಯಾರಿಸ್‌ ನಗರದಲ್ಲಿ ನಡೆಯಲಿವೆ. ‘ಕ್ಲೈಂಬಿಂಗ್‌’ ಆಟವನ್ನು ಹೊಸದಾಗಿ ಸೇರಿಸಲಾಗಿದೆ. ಇನ್ನೊಂದೆಡೆ ಬೇಸ್‌ಬಾಲ್‌, ಸಾಫ್ಟ್‌ಬಾಲ್‌, ಕರಾಟೆ ಕೈಬಿಡಲಾಗಿದೆ. ಮೊದಲ ಬಾರಿಗೆ ಒಲಂಪಿಕ್ಸ್‌ ಮತ್ತು ಪ್ಯಾರಾಲಂಪಿಕ್ಸ್‌ಗೆ ಒಂದೇ ಲಾಂಛನ ಬಳಕೆ ಮಾಡಲು ನಿರ್ಧರಿಸಲಾಗಿದೆ.