ನವದೆಹಲಿ(ಮೇ.29): ಈ ವರ್ಷ ಜುಲೈನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ರ ಕನಸು ಭಗ್ನಗೊಂಡಿದೆ. 

ಒಲಿಂಪಿಕ್ಸ್‌ ಅರ್ಹತೆಗೆ ಮತ್ತ್ಯಾವ ಟೂರ್ನಿಯೂ ನಡೆಯುವುದಿಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌(ಬಿಡಬ್ಲ್ಯುಎಫ್‌) ಸ್ಪಷ್ಟಪಡಿಸಿದೆ. ಸೈನಾ ನೆಹ್ವಾಲ್ ಹಾಗೂ ಶ್ರೀಕಾಂತ್‌, ಇಂಡಿಯಾ ಓಪನ್‌, ಮಲೇಷ್ಯಾ ಓಪನ್‌ ಹಾಗೂ ಸಿಂಗಾಪುರ ಓಪನ್‌ ಟೂರ್ನಿಗಳಲ್ಲಿ ಆಡಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಕೋವಿಡ್‌ನಿಂದಾಗಿ ಮೂರೂ ಟೂರ್ನಿಗಳು ರದ್ದಾದವು. 

ಸೈನಾ ನೆಹ್ವಾಲ್, ಶ್ರೀಕಾಂತ್‌ ಒಲಿಂಪಿಕ್‌ ಕನಸು ಭಗ್ನ?

ಇದೇ ಜೂನ್‌ 15ರೊಳಗೆ ಬ್ಯಾಡ್ಮಿಂಟನ್‌ನಲ್ಲಿ ಅಗ್ರ 16ರೊಳಗೆ ರ‍್ಯಾಂಕಿಂಗ್‌ ಹೊಂದಿರುವವರು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಸದ್ಯ ಲಂಡನ್ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 22ನೇ ರ‍್ಯಾಂಕಿಂಗ್‌ ಹೊಂದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 20ನೇ ರ‍್ಯಾಂಕಿಂಗ್‌ ಹೊಂದಿರುವ ಕಿದಂಬಿ ಶ್ರೀಕಾಂತ್‌ಗೆ ಕೂಡಾ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನವಾಗಿದೆ. 

ಜುಲೈ 23ರಿಂದ ಆಗಸ್ಟ್‌ 08ರವರೆಗೆ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌, ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಪ್ರತಿನಿಧಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸಾಯಿ ಪ್ರಣೀತ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಪುರುಷರ ಡಬಲ್ಸ್‌ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಭಾರತ ಧ್ಜಜದಡಿ ಒಲಿಂಪಿಕ್ಸ್‌ನಲ್ಲಿ ಸೆಣಸಾಟ ನಡೆಸಲಿದ್ದಾರೆ