ಟೋಕಿಯೋ ಒಲಿಂಪಿಕ್ಸ್‌ಗೆ ಜಪಾನ್‌ನ ಶೇ.80ಕ್ಕಿಂತ ಹೆಚ್ಚು ಜನರ ವಿರೋಧ
* ಟೋಕಿಯೋ ಒಲಿಂಪಿಕ್ಸ್ ಆಯೋಜನೆಗೆ ಜಪಾನಿಗರಿಂದಲೇ ವಿರೋಧ
* ಶೇ.80% ಮಂದಿಯಿಂದ ಈ ಬಾರಿ ಒಲಿಂಪಿಕ್ಸ್ ಬೇಡ ಎನ್ನುವ ಅಭಿಪ್ರಾಯ
* ಜಪಾನಿನಲ್ಲಿ 4ನೇ ಕೋವಿಡ್ ಅಲೆಯ ಅಬ್ಬರ ಜೋರಾಗಿದೆ
ಟೋಕಿಯೋ(ಮೇ.18): 2021ನೇ ಸಾಲಿನ ಬೇಸಿಗೆ ಟೋಕಿಯೋ ಒಲಿಂಪಿಕ್ಸ್‌ಗೆ 10 ವಾರಕ್ಕಿಂತ ಕಡಿಮೆ ಅವಧಿ ಇರುವ ಬೆನ್ನಲ್ಲೇ, ವಿಶ್ವಾದ್ಯಂತ ಕೊರೋನಾ ಭೀತಿ ಇರುವ ಇಂಥ ಸಂದರ್ಭದಲ್ಲಿ ದೇಶದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಜಪಾನಿನ ಶೇ.80ಕ್ಕಿಂತ ಹೆಚ್ಚು ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೋನಾ ವೈರಸ್‌ನ 4ನೇ ಅಲೆಯಿಂದ ಹೆಚ್ಚುತ್ತಿರುವ ಸೋಂಕಿತರಿಂದಾಗಿ ಜಪಾನ್‌ನ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಹಾನಿಯಾಗಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಂಥ ಹೊತ್ತಿನಲ್ಲಿ ಒಲಿಂಪಿಕ್ಸ್ ನಡೆಸಬಾರದು ಎಂದು ಶೇ.80ಕ್ಕಿಂತ ಹೆಚ್ಚು ಜನ ತಿಳಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಇದೇ ವೇಳೆ ಈ ಸಮೀಕ್ಷೆಯಲ್ಲಿ ಶೇ.14ರಷ್ಟು ಜನ ಮಾತ್ರವೇ ಒಲಿಂಪಿಕ್ಸ್ ನಡೆಸಲು ಒಪ್ಪಿದ್ದಾರೆ. 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವು ಕೊರೋನಾ ಹಾವಳಿಯಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 23ರಿಂದ ಆಗಸ್ಟ್ 08ರ ವರೆಗೆ ಜರುಗಲಿದೆ.
ಜಪಾನಿನಲ್ಲಿ ಕೇವಲ 1% ಜನರಿಗಷ್ಟೇ ಕೋವಿಡ್ ಲಸಿಕೆ..!
ಜಪಾನ್‌ನಲ್ಲಿ ಇಲ್ಲಿಯವರೆಗೆ ಕೇವಲ 1% ಮಂದಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಇದರೊಂದಿಗೆ ಜಗತ್ತಿನ ಅತಿದೊಡ್ಡ ಕ್ರೀಡಾಸಂಗ್ರಾಮ ಆಯೋಜಿಸಲು ಜಪಾನ್ ಸಂಪೂರ್ಣ ಸಜ್ಜಾಗಿದೆಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona