ಟೋಕಿಯೋ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ನಾಯಕ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ
* 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಹಾಕಿ ತಂಡ
ನವದೆಹಲಿ(ಜೂ.23): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವನ್ನು ಹಾಲಿ ನಾಯಕ ಮನ್‌ಪ್ರೀತ್ ಸಿಂಗ್ ಅವರೇ ಮುನ್ನಡೆಸಲಿದ್ದಾರೆ ಎಂದು ಹಾಕಿ ಇಂಡಿಯಾ ಮಂಗಳವಾರ ಘೋಷಿಸಿದೆ.
3 ದಿನಗಳ ಹಿಂದೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದ ವೇಳೆ ನಾಯಕ ಯಾರು ಎಂದು ತಿಳಿಸಿರಲಿಲ್ಲ. ಇದೇ ವೇಳೆ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಬೀರೇಂದ್ರ ಲಾಕ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಜು.23ರಿಂದ ಒಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಭಾರತ ಹಾಕಿ ತಂಡದಲ್ಲಿ ಈ ಬಾರಿ 10 ಹೊಸ ಆಟಗಾರರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಕರ್ನಾಟಕದ ಯಾವೊಬ್ಬ ಹಾಕಿ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. 1972ರಿಂದೀಚೆಗೆ ಪ್ರತಿ ಒಲಿಂಪಿಕ್ಸ್‌ನಲ್ಲೂ ಕರ್ನಾಟಕದಿಂದ ಒಬ್ಬರಾದರೂ ಆಟಗಾರರು ಪಾಲ್ಗೊಳ್ಳುತ್ತಿದ್ದರು. ಎಸ್.ವಿ. ಸುನೀಲ್ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಪುರುಷರ ಹಾಕಿ ತಂಡ ಪ್ರಕಟ
ಭಾರತ ಹಾಕಿ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಒಲಿಂಪಿಕ್ ಹಾಲಿ ಚಾಂಪಿಯನ್ ಅರ್ಜಿಂಟೀನಾ, ಮೂರು ಬಾರಿಯ ವಿಶ್ವಚಾಂಪಿಯನ್ ಹಾಗೂ ಹಾಲಿ ನಂ.1 ಶ್ರೇಯಾಂಕಿತ ತಂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ಪೇನ್ ಹಾಗೂ ಆತಿಥೇಯ ಜಪಾನ್ ತಂಡಗಳು ಸ್ಥಾನ ಪಡೆದಿವೆ.