* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ವಿಭಾಗದಲ್ಲಿ ಅಮೆರಿಕದ ಓಟಗಾರ ಟ್ರೇವೊನ್‌ ಬ್ರೊಮೆಲ್‌ ಚಿನ್ನ ಗೆಲ್ಲಬಹುದು ಎಂದ ಬೋಲ್ಟ್* 100 ಮೀಟರ್, 200 ಮೀಟರ್‌ ವಿಭಾಗದಲ್ಲಿ ವಿಶ್ವದಾಖಲೆ ಬರೆದಿರುವ ಬೋಲ್ಟ್* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭವಾಗಲಿದೆ

ಯುಜೀನ್‌(ಜೂ.26): ಟೋಕಿಯೋ ಒಲಿಂಪಿಕ್ಸ್‌ನ 100 ಮೀ. ಓಟದಲ್ಲಿ ಅಮೆರಿಕದ 25 ವರ್ಷದ ಓಟಗಾರ ಟ್ರೇವೊನ್‌ ಬ್ರೊಮೆಲ್‌ ಚಿನ್ನ ಗೆಲ್ಲಬಹುದು ಎಂದು ವಿಶ್ವದ ವೇಗದ ಓಟಗಾರ, ಜಮೈಕಾದ ಮಾಜಿ ಅಥ್ಲೀಟ್‌ ಉಸೇನ್‌ ಬೋಲ್ಟ್‌ ಭವಿಷ್ಯ ನುಡಿದಿದ್ದಾರೆ. 

‘ಇತ್ತೀಚೆಗೆ ಅಮೆರಿಕದ ಆಯ್ಕೆ ಟ್ರಯಲ್ಸ್‌ನಲ್ಲಿ ಬ್ರೊಮೆಲ್‌ ಓಡುವುದನ್ನು ನೋಡಿದೆ. ಆತ ಅತ್ಯುತ್ತಮ ಓಟಗಾರ. ಬಹಳ ನಿರೀಕ್ಷೆ ಇದೆ’ ಎಂದು ಬೋಲ್ಟ್‌ ಹೇಳಿದ್ದಾರೆ. ನಾನಲ್ಲದೇ ಬೇರೆಯೊಬ್ಬ ಅಥ್ಲೀಟ್‌ 100 ಮೀಟರ್ ಓಟದ ಸ್ಫರ್ಧೆಯಲ್ಲಿ ಚಿನ್ನ ಗೆಲ್ಲಲಿದ್ದಾನೆ ಎನ್ನುವುದು ವಿಚಿತ್ರ ಎನಿಸಿದರೂ, ಈ ಬಾರಿಯ ಸ್ಪರ್ಧೆಯನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಬೋಲ್ಟ್ ಹೇಳಿದ್ದಾರೆ.

ಹರ್ಯಾಣ ಅಥ್ಲೀಟ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 6 ಕೋಟಿ ರುಪಾಯಿ ಬಹುಮಾನ!

ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಉಸೇನ್ ಬೋಲ್ಟ್‌ ಜಯಿಸಿದ್ದಾರೆ. 100 ಹಾಗೂ 200 ಮೀಟರ್ ಓಟದ ವಿಭಾಗದಲ್ಲಿ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ ಏಕೈಕ ಅಥ್ಲೀಟ್‌ ಎನ್ನುವ ದಾಖಲೆ ಜಮೈಕಾ ಅಥ್ಲೀಟ್‌ ಬೋಲ್ಟ್ ಹೆಸರಿನಲ್ಲಿದೆ. ಉಸೇನ್‌ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್ ಹಾಗೂ 200 ಮೀಟರ್ ಓಟವನ್ನು 19.19 ಸೆಕೆಂಡ್‌ಗಳಲ್ಲಿ ಪೂರೈಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 

2017ರಲ್ಲಿ ನಿವೃತ್ತರಾಗಿದ್ದ 34 ವರ್ಷದ ಬೋಲ್ಟ್‌, 2004ರ ಬಳಿಕ ಇದೇ ಮೊದಲ ಬಾರಿಗೆ ಉಸೇನ್‌ ಬೋಲ್ಟ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.