ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದೆ ಜಪಾನ್: ಮಹಾ ಲಸಿಕೆ ಅಭಿಯಾನಕ್ಕೆ ಚಾಲನೆ
* ಜಾಗತಿಕ ಕ್ರೀಡೆ ಟೋಕಿಯೋ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದೆ ಜಪಾನ್
* ಮಹಾ ಲಸಿಕೆ ಅಭಿಯಾನ ಆರಂಭಿಸಿದ ಜಪಾನ್ ಸರ್ಕಾರ
* ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 08ರ ವರೆಗೆ ನಡೆಯಲಿದೆ
ಟೋಕಿಯೋ(ಮೇ.25): ಕಳೆದ ವರ್ಷ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಈ ವರ್ಷದ ಜು.23ರಿಂದ ನಡೆಸಲು ಪಣ ತೊಟ್ಟಿರುವ ಜಪಾನ್ ಸರ್ಕಾರ, ತನ್ನ ದೇಶದ ಹಿರಿಯ ನಾಗರಿಕರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ ಜಪಾನ್ ಸರ್ಕಾರವು ತನ್ನ ಮಿಲಿಟರಿ ವೈದ್ಯರು, ನರ್ಸ್‌ಗಳನ್ನೂ ನಿಯೋಜಿಸಿದೆ. ರಾಜಧಾನಿ ಟೋಕಿಯೋ, ಬಂದರು ನಗರಿ ಒಸಾಕಾದಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮ ಆರಂಭಿಸಿದ್ದು, ಜುಲೈ ಅಂತ್ಯದ ವೇಳೆ ದೇಶದ 3.6 ಕೋಟಿ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಗುರಿ ಹೊಂದಿದೆ.
ಜಾಗತಿಕ ಪಿಡುಗಾಗಿರುವ ಕೊರೋನಾ ವೈರಸ್ ವಿರುದ್ದ ಅಮೆರಿಕದಲ್ಲಿ ಶೇ.40% ಹಾಗೂ ಫ್ರಾನ್ಸ್‌ನಲ್ಲಿ 15% ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಈ ಎರಡು ದೇಶಗಳಿಗೆ ಹೋಲಿಸಿದರೆ 12.5 ಕೋಟಿ ಜನಸಂಖ್ಯೆ ಹೊಂದಿರುವ ಜಪಾನಿನಲ್ಲಿ ಕೇವಲ 02% ಮಂದಿಗೆ ಮಾತ್ರ ಇಲ್ಲಿಯವರೆಗೆ ಕೋವಿಡ್ ಲಸಿಕೆ ಹಾಕಲಾಗಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಜಪಾನ್‌ನ ಶೇ.80ಕ್ಕಿಂತ ಹೆಚ್ಚು ಜನರ ವಿರೋಧ
ಜಗತ್ತಿನ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಜಪಾನಿನಲ್ಲಿ ಕೋವಿಡ್‌ನಿಂದ ಅಂತಹ ಸಾವು-ನೋವು ಸಂಭವಿಸಿಲ್ಲ. ಇದುವರೆಗೂ ಜಪಾನಿನಲ್ಲಿ ಸರಿಸುಮಾರು 12 ಸಾವಿರ ಮಂದಿ ಕೋವಿಡ್‌ನಿಂದಾಗಿ ಕೊನೆಯುಸಿರೆಳೆದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜಪಾನ್‌ನಲ್ಲಿ ಕೋವಿಡ್ ಪ್ರಕರಣಗಳು ನಿಧಾನವಾಗಿ ಹೆಚ್ಚಾಗುತ್ತಿರುವುದು ಆಯೋಜಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಸದ್ಯ ಟೋಕಿಯೋ, ಒಸಾಕಾ ಸೇರಿದಂತೆ ಒಟ್ಟು 10 ನಗರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪರಿಣಾಮ ಮೇ ತಿಂಗಳಾಂತ್ಯದ ವರೆಗೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇದೇ ವೇಳೆ ಜನಜೀವನದ ರಕ್ಷಣೆಯ ಉದ್ದೇಶದಿಂದ ಈ ಬಾರಿಯೂ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಿ ಎಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ.
ಭಾರತದ ಕೊರೋನಾ ಅಂಕಿ-ಅಂಶ:
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona