2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯ
* 2032ರ ಒಲಿಂಪಿಕ್ಸ್‌ಗೆ ಆತಿಥ್ಯ ಪಡೆದ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರ
* ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಅಧಿಕೃತ ಘೋಷಣೆ
* ಮೂರನೇ ಒಲಿಂಪಿಕ್ಸ್‌ಗೆ ಆತಿಥ್ಯ ಪಡೆದ ಆಸ್ಟ್ರೇಲಿಯಾ
ಟೋಕಿಯೋ(ಜು.21): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನೆರಡು ದಿನ ಬಾಕಿಯಿದೆ. ಹೀಗಿರುವಾಗಲೇ 2032 ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮೂರನೇ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೆ ಆತಿಥ್ಯವನ್ನು ಪಡೆದುಕೊಂಡಂತೆ ಆಗಿದೆ.
ಹೌದು, ಟೋಕಿಯೋ ಒಲಿಂಪಿಕ್ಸ್ ಮುಕ್ತಾಯದ ಬಳಿಕ 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ನಂತರ 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ನಡೆಯಲಿದೆ. ಇನ್ನು 2032ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯದ ಹಕ್ಕು ಬ್ರಿಸ್ಬೇನ್ ಪಾಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಬುಧವಾರ(ಜು.21) ತಿಳಿಸಿದೆ.
35ನೇ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯದ ಹಕ್ಕನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರ ಪಡೆದುಕೊಂಡಿದೆ ಎಂದು ತಿಳಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಂತೋಷವಾಗುತ್ತಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಘೋಷಿಸಿದ್ದಾರೆ. ಐಸಿಸಿ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಹೊರಬೀಳುತ್ತಿದ್ದಂತೆಯೇ ಬ್ರಿಸ್ಬೇನ್‌ನ ಅಧಿಕಾರಿಗಳು ಹರ್ಷೋದ್ಘಾರ ಮಾಡಿದ್ದಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಜಪಾನ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಬಂದಿದೆ: ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಚ್
ಮೂರು ನಗರಗಳಲ್ಲಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ಎರಡನೇ ದೇಶ ಎನ್ನುವ ಗೌರವಕ್ಕೆ ಇದೀಗ ಆಸ್ಟ್ರೇಲಿಯಾ ಪಾತ್ರವಾಗಿದೆ. ಈ ಮೊದಲು ಅಮೆರಿಕ ತನ್ನ ದೇಶದ ಮೂರು ನಗರಗಳಲ್ಲಿ ಒಲಿಂಪಿಕ್ಸ್ ಆಯೋಜಿಸಿ ಸೈ ಎನಿಸಿಕೊಂಡಿದೆ. ಈಗಾಗಲೇ 1956ರಲ್ಲಿ ಮೆಲ್ಬರ್ನ್ ಹಾಗೂ 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಒಲಿಂಪಿಕ್ಸ್ ನಡೆದಿತ್ತು. ಇದೀಗ ಬ್ರೀಸ್ಬೇನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರನೇ ಒಲಿಂಪಿಕ್ಸ್ ಕ್ರೀಡಾಕೂಟ ಎನಿಸಿದೆ.