ಟೋಕಿಯೋ ಒಲಿಂಪಿಕ್ಸ್‌ಗೆ 100 ದಿನ ಬಾಕಿ!
2021ರ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಭಾರತ 17 ಪದಕಗಳನ್ನು ಗೆಲ್ಲಬಹುದು ಸಮೀಕ್ಷೆಯೊಂದು ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.15): ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಕೇವಲ 100 ದಿನ ಮಾತ್ರ ಬಾಕಿ ಇದೆ. ಜುಲೈ 23ರಿಂದ ಆಗಸ್ಟ್ 8ರ ವರೆಗೂ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಭಾರತದಿಂದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವ ಕ್ರೀಡಾಪಟುಗಳು, ಅವರ ಇತ್ತೀಚಿನ ಪ್ರದರ್ಶನ, ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಭಾರತ 17 ಪದಕಗಳನ್ನು ಗೆಲ್ಲಬಹುದು ಎಂದು ಗ್ರೇಸ್‌ನೋಟ್ ಸಂಸ್ಥೆ ಭವಿಷ್ಯ ನುಡಿದಿದೆ.
ಒಲಿಂಪಿಕ್ಸ್‌ನ ವಿಶ್ಲೇಷಣೆ ನಡೆಸುವ, ಅಂಕಿ-ಅಂಶಗಳನ್ನು ಪೂರೈಸುವ ಗ್ರೇಸ್‌ನೋಟ್ ಸಂಸ್ಥೆ, ಭಾರತ ಶೂಟಿಂಗ್‌ನಲ್ಲಿ 8, ಬಾಕ್ಸಿಂಗ್‌ನಲ್ಲಿ 4, ಕುಸ್ತಿಯಲ್ಲಿ 3, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ತಲಾ ಒಂದು ಪದಕ ಗೆಲ್ಲಲಿದೆ. 4 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳು ಸೇರಿ ಒಟ್ಟು 17 ಪದಕಗಳು ಭಾರತದ ಪಾಲಾಗಿದೆ ಎಂದು ವಿವರಿಸಿದೆ.
ಸೇಯ್ಲಿಂಗ್: ಒಲಿಂಪಿಕ್ಸ್‌ಗೆ ರಾಜ್ಯದ ಗಣಪತಿಗೆ ಅರ್ಹತೆ
ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಭಜರಂಗ್ ಪೂನಿಯಾ, 10 ಮೀ. ಏರ್ ರೈಫಲ್‌ನಲ್ಲಿ ಇಳವೆನಿಲ್ ವಲರಿವನ್, 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್-ಸೌರಭ್ ಚೌಧರಿ ಚಿನ್ನ ಜಯಿಸಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಒಂದೊಮ್ಮೆ ಭಾರತ 17 ಪದಕ ಜಯಿಸಿದರೆ, ಕಳೆದ 12 ಒಲಿಂಪಿಕ್ಸ್‌ಗಳಲ್ಲಿ ಗೆದ್ದ ಒಟ್ಟು ಪದಕಗಳನ್ನು ಒಂದೇ ಆವೃತ್ತಿಯಲ್ಲಿ ಗೆದ್ದಂತಾಗುತ್ತದೆ. ಈಗಾಗಲೇ 90 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದು, ಇನ್ನೂ ಕೆಲವರು ಒಲಿಂಪಿಕ್ಸ್ ಕೋಟಾ ಗಳಿಸುವ ನಿರೀಕ್ಷೆ ಇದೆ.