ದೋಹಾ(ನ.11): 14ನೇ ಏಷ್ಯನ್ ಶೂಟಿಂಗ್‌ನಲ್ಲಿ ಭಾನುವಾರ ಭಾರತೀಯ ಶೂಟರ್‌ಗಳು 3 ಪದಕಗಳನ್ನು ಗೆದ್ದರು. ಇದರ ಜತೆಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದವರ ಸಂಖ್ಯೆ 15ಕ್ಕೇರಿತು.

ಇಲ್ಲಿ ನಡೆದ ಪುರುಷರ ಸ್ಕೀಟ್‌ನಲ್ಲಿ ಭಾರತ ಅವಳಿ ಪದಕಗಳನ್ನು ಗೆದ್ದುಕೊಂಡಿತು. ಅಂಗದ್ ವೀರ್ ಸಿಂಗ್ ಬಾಜ್ವಾ ಚಿನ್ನ, ಮೈರಾಜ್ ಅಹ್ಮದ್ ಖಾನ್ ಬೆಳ್ಳಿ ಪದಕ ಗೆದ್ದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ನಲ್ಲಿ ಭಾರತದ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಗೆದ್ದರು. ಈ ಮೂಲಕ ಈ ಮೂವರು ಟೋಕಿಯೋ ಒಲಿಂಪಿಕ್ಸ್’ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಏಷ್ಯನ್‌ ಶೂಟಿಂಗ್‌: ಚಿಂಕಿಗೆ ಒಲಿಂಪಿಕ್ಸ್‌ ಟಿಕೆಟ್

ಶೂಟಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ 15 ಒಲಿಂಪಿಕ್ ಕೋಟಾಗಳನ್ನು ಸಂಪಾದಿಸಿದೆ. ಭಾರತೀಯ ಶೂಟರ್‌ಗಳು 2016ರ ರಿಯೋ ಒಲಿಂಪಿಕ್ಸ್‌ಗೆ 12 ಕೋಟಾ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 11 ಕೋಟಾ ಪಡೆದಿದ್ದರು. ಪುರುಷರ ಸ್ಕೀಟ್ ಫೈನಲ್‌ನಲ್ಲಿ ಅಂಗದ್ ಹಾಗೂ ಮೈರಾಜ್ ನಡುವೆ 56 ಅಂಕಗಳಲ್ಲಿ ಟೈ ಆಗಿತ್ತು. ಚಿನ್ನದ ಪದಕಕ್ಕಾಗಿ ನಡೆದ ಶೂಟ್‌ಆಫ್‌ನಲ್ಲಿ ಅಂಗದ್ 6-5ರಲ್ಲಿ ಗೆದ್ದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ಫೈನಲ್‌ನಲ್ಲಿ ಐಶ್ವರ್ಯಾ ತೋಮರ್449.1 ಅಂಕಗಳನ್ನು ಸಂಪಾದಿಸಿದ್ದು, 8 ಮಂದಿಯ ಫೈನಲ್‌ನಲ್ಲಿ 3ನೇ ಸ್ಥಾನ ಸಂಪಾದಿಸಿದ್ದರು. 

ಭಾರತೀಯ ಶೂಟರ್’ಗಳ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ಮೊದಲ ಬಾರಿಗೆ 15 ಶೂಟರ್’ಗಳು ಒಲಿಂಪಿಕ್ಸ್’ಗೆ ಅರ್ಹತೆಗಿಟ್ಟಿಸುವ ಮುಲಕ ಹೊಸ ಇತಿಹಾಸ ಬರೆದಿದ್ದಾರೆ. ಈ ಎಲ್ಲ ಸಾಧಕರಿಗೆ ಅಭಿನಂದನೆಗಳು, ನಿಮ್ಮ ಮುಂದಿನ ಪಯಣವು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ. 

ಶೂಟಿಂಗ್’ನಲ್ಲಿ ಟೋಕಿಯೋ ಒಲಿಂಪಿಕ್ಸ್’ಗೆ ಅರ್ಹತೆಗಿಟ್ಟಿಸಿದ 15 ಶೂಟರ್’ಗಳಿವರು...

01. ಅಂಜುಮ್ ಮೌದ್ಗಿಲ್[ಮಹಿಳೆಯರ 10 ಮೀಟರ್ ಏರ್ ರೈಫಲ್]

02. ಅಪೂರ್ವಿ ಚಾಂಡೆಲಾ[10 ಮೀಟರ್ ಏರ್ ರೈಫಲ್]

03. ಸೌರಭ್ ಚೌಧರಿ[10 ಮೀಟರ್ ಏರ್ ಪಿಸ್ತೂಲ್]

04. ದಿವ್ಯಾನ್ಯು ಸಿಂಗ್ ಪನ್ವಾರ್[ಪುರುಷರ 10 ಮೀಟರ್ ಏರ್ ರೈಫಲ್]

05. ಸಂಜೀವ್ ರಜಪೂತ್[50 ಮೀಟರ್ ರೈಫಲ್ 3 ಪೊಸಿಷನ್]

06. ಅಭಿಷೇಕ್ ವರ್ಮಾ[10 ಮೀಟರ್ ಏರ್ ಪಿಸ್ತೂಲ್]

07. ರಾಹಿ ಸರ್ನೋಬತ್ [25 ಮೀಟರ್ ಮಹಿಳಾ ಪಿಸ್ತೂಲ್ ವಿಭಾಗ]

08. ಮನು ಭಾಕರ್[10 ಮೀಟರ್ ಮಹಿಳಾ ಪಿಸ್ತೂಲ್ ವಿಭಾಗ]

09. ಯಶಸ್ವಿನಿ ಸಿಂಗ್[10 ಮೀಟರ್ ಏರ್ ಪಿಸ್ತೂಲ್]

10. ದೀಪಕ್‌ ಕುಮಾರ್‌[ಪುರುಷರ 10 ಮೀ. ಏರ್‌ ರೈಫಲ್‌]

11. ಚಿಂಕಿ ಯಾದವ್[ಮಹಿಳೆಯರ 25 ಮೀ. ಪಿಸ್ತೂಲ್]

12. ತೇಜಸ್ವಿನಿ ಸಾವಂತ್ [ಮಹಿಳೆಯರ 50 ಮೀ ರೈಫಲ್ 3 ಪೊಸಿಷನ್ಸ್]

13. ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್[ಪುರುಷರ 50 ಮೀ ರೈಫಲ್ 3 ಪೊಸಿಷನ್ಸ್]

14. ಅಂಗದ್ ವೀರ್ ಸಿಂಗ್ ಬಾಜ್ವಾ[ಪುರುಷರ ಸ್ಕಿಟ್ ವಿಭಾಗ]

15. ಮೈರಾಜ್ ಅಹ್ಮದ್ ಖಾನ್[ಪುರುಷರ ಸ್ಕಿಟ್ ವಿಭಾಗ]