ಟೋಕಿಯೋ ಒಲಿಂಪಿಕ್ಸ್‌ಗೆ ಇಂದು ವೈಭವದ ತೆರೆ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಮುಕ್ತಾಯ
* ಇಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ
* ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಭಾರತ
ಟೋಕಿಯೋ(ಆ.08): 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಭಾನುವಾರ ವೈಭವದ ತೆರೆ ಬೀಳಲಿದೆ. ಅಂತಿಮ ದಿನ ಪುರುಷರ ಮ್ಯಾರಥಾನ್ ಸೇರಿ ಕೆಲ ಪ್ರಮುಖ ಸ್ಪರ್ಧೆಗಳು ಬಾಕಿ ಇವೆ. ಭಾರತದ ಸವಾಲು ಮುಕ್ತಾಯಗೊಂಡಿದ್ದು, ಭಾನುವಾರ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಪಾಲ್ಗೊಳ್ಳುವುದಿಲ್ಲ. ಆದರೆ ಸಮಾರೋಪ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ, ಭಾರತದ ಧ್ವಜಧಾರಿಯಾಗುವ ಸಾಧ್ಯತೆ ಇದೆ. ಕೋವಿಡ್ ಆತಂಕದ ನಡುವೆಯೂ ಜಪಾನ್ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದೆ. ಒಲಿಂಪಿಕ್ಸ್ ಧ್ವಜವನ್ನು 2024ರಲ್ಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಫ್ರಾನ್ಸ್‌ಗೆ ಹಸ್ತಾಂತರಿಸಲಾಗುತ್ತದೆ. ಇದೇ ತಿಂಗಳು 24ರಿಂದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆ ಕ್ರೀಡಾಕೂಟಕ್ಕೂ ಟೋಕಿಯೋ ಆತಿಥ್ಯ ನೀಡಲಿದೆ. ಸೆಪ್ಟೆಂಬರ್ 5ಕ್ಕೆ ಪ್ಯಾರಾಲಿಂಪಿಕ್ಸ್ ಮುಕ್ತಾಯಗೊಳ್ಳಲಿದೆ.
ಚಿನ್ನ ಗೆದ್ದ ನೀರಜ್‌ಗೆ ಮಹೀಂದ್ರಾದಿಂದ XUV 700 ಗಿಫ್ಟ್!
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭ ಭಾರತೀಯ ಕಾಲಮಾನ 4.30ಕ್ಕೆ ಆರಂಭವಾಗಲಿದೆ. ಅದ್ದೂರಿ ಸಮಾರೋಪ ಸಮಾರಂಭವು ಸೋನಿ ಟೆನ್, ಸೋನಿ ಲಿವ್ ನಲ್ಲಿ ಪ್ರಸಾರವಾಗಲಿದೆ
ಈ ಬಾರಿ 7 ಪದಕ: ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ
ಒಲಿಂಪಿಕ್ಸ್ ಆವೃತ್ತಿಯೊಂದರಲ್ಲಿ ಭಾರತದ ಗರಿಷ್ಠ ಪದಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಭಾರತ 7 ಪದಕಗಳೊಂದಿಗೆ ತವರಿಗೆ ಹಿಂದಿರುಗಲಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕಗಳನ್ನು ಜಯಿಸಿತ್ತು. ಆ ದಾಖಲೆಯನ್ನು ಈ ಬಾರಿ ಭಾರತೀಯ ಕ್ರೀಡಾಪಟುಗಳು ಮುರಿದಿದ್ದಾರೆ. ಈ ಬಾರಿಯ ಪ್ರದರ್ಶನ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕ ತಂದುಕೊಡುವ ಭರವಸೆ ಮೂಡಿಸಿದೆ.