Asianet Suvarna News Asianet Suvarna News

ವರ್ಚುವಲ್ ಟ್ರಾವೆಲ್: ಕುಳಿತಲ್ಲೇ ಬ್ರಹ್ಮಾಂಡ ದರ್ಶನದ ಕಂಪ್ಲೀಟ್ ಡಿಟೇಲ್!

ವರ್ಚುಯಲ್ ಟ್ರಾವೆಲ್ ಏನು ಹೊಸತಲ್ಲ, ಶತಮಾನಗಳಿಂದಲೂ ಕತೆ ಹೇಳುವವರು, ಟ್ರಾವೆಲ್ ರೈಟರ್ಸ್ ಹಾಗೂ ಕಲಾವಿದರ ಪ್ರವಾಸದ ಅನುಭವ, ವರ್ಣನೆಯನ್ನು ಮನೆಯ ಕುರ್ಚಿಯಲ್ಲೇ ಕುಳಿತು ಅನುಭವಿಸುವುದು ನಡೆದುಕೊಂಡೇ ಬಂದಿದೆ. 

Your next vacation may be virtual know about it more
Author
Bengaluru, First Published Oct 31, 2019, 4:31 PM IST

ಜಪಾನ್‌ನ ದೊಡ್ಡ ಏರ್‌ಲೈನ್ ಪ್ರಕಾರ, ಪ್ರವಾಸದ ಭವಿಷ್ಯ ಪ್ರವಾಸ ಮಾಡುವುದು ಅಲ್ಲವೇ ಅಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಪ್ರವಾಸದ ಅನುಭವ ಪಡೆಯುವುದು. ಅಂದರೆ, ಜಗತ್ತಿನ ಯಾವುದೇ ಸ್ಥಳಕ್ಕೆ ಹೋಗಲು ಲಕ್ಷಗಟ್ಟಲೆ ಖರ್ಚು ಮಾಡಬೇಕಿಲ್ಲ, ಸುತ್ತಾಡಿದ ಆ ಸುಸ್ತು ಇರುವುದಿಲ್ಲ. ಆದರೂ ಕೂಡಾ ಅದೇ ಸ್ಥಳದಲ್ಲಿ ನಿಂತು ಅನುಭವ ಗಳಿಸುತ್ತಿರುವಂಥ 360 ಡಿಗ್ರಿ ವ್ಯೂನೊಂದಿಗೆ ಸುಂದರ ತಾಣಗಳನ್ನು ನೋಡುತ್ತಾ ಅಲ್ಲೇ ಅಡ್ಡಾಡಿದ ಅನುಭವ ಪಡೆಯುವುದು. 
ಅರೆ! ಹೇಗೆ ಸಾಧ್ಯ ಇದು ಎಂದ್ರಾ? ತಂತ್ರಜ್ಞಾನ ಬೆಳವಣಿಗೆಗೆ ಮಿತಿಯೇ ಇಲ್ಲದ ಈ ಘಟ್ಟದಲ್ಲಿ ಎಲ್ಲವೂ ಸಾಧ್ಯ. ಕೇವಲ ಈ ಭೂಮಿಯೇಕೆ, ಚಂದ್ರನ ಮೇಲೆ ಕೂಡಾ ಕುಳಿತಲ್ಲಿಂದಲೇ ಸುತ್ತಾಡಿ ಬರುವ ದಿನಗಳೂ ದೂರವಿಲ್ಲ.
ಇದನ್ನೇ ವರ್ಚುಯಲ್ ಟ್ರಾವೆಲ್ ಎನ್ನುವುದು. 

ಹೇಗೆ ಕೆಲಸ ಮಾಡುತ್ತದೆ?
ಜಪಾನ್ ಓಯಿಟಾದಲ್ಲಿ ವಾಸಿಸುವ ದಂಪತಿಯು ಅವತಾರ್ ಎಂಬ ರೋಬೋಟ್ ಖರೀದಿಸಿದ್ದಾರೆ. ಇದನ್ನು ಮನೆಯಿಂದ ನೂರಾರು ಕಿಲೋಮೀಟರ್ ದೂರದ ಟೋಕಿಯೋದಲ್ಲಿ ವಾಸಿಸುವ ಅವರ ಮಗಳು ನಿಯಂತ್ರಿಸುತ್ತಾಳೆ. ಸಣ್ಣ ವ್ಯಾಕ್ಯೂಮ್ ಕ್ಲೀನರ್‌ಗೆ ಐಪ್ಯಾಡ್ ಜೋಡಿಸಿದಂತೆ ಕಾಣುವ ಈ ರೋಬೋಟ್‌ನಲ್ಲಿ ಮಗಳು ಚಾಟ್ ಮಾಡುವಾಗೆಲ್ಲ ಆಕೆಯ ಮುಖ ಕಾಣುತ್ತದೆ. ಅವಳು ಮನೆಯಲ್ಲೇ ಇರುವಂತೆ ಮನೆ ತುಂಬಾ ಬೇಕೆಂದಲ್ಲಿ ಅವಳದನ್ನು ಓಡಾಡಿಸುತ್ತಾಳೆ. ಅಪ್ಪಅಮ್ಮನೊಂದಿಗೆ ಈ ರೋಬೋಟ್ ಊಟಕ್ಕೆ ಕೂರುತ್ತದೆ ಕೂಡಾ! ಒಟ್ಟಿನಲ್ಲಿ ಆಕೆ ಮನೆಯಲ್ಲೇ ಇರುವ ಅನುಭವ ಪೋಷಕರಿಗೂ, ಮಗಳಿಗೂ ಸಿಗುತ್ತದೆ. ಇದೇ ತಂತ್ರಜ್ಞಾನ, ಕಲ್ಪನೆ ವರ್ಚುಯಲ್ ಟ್ರಾವೆಲ್ ಹಿಂದಿರುವುದು. 
ಇಷ್ಟಕ್ಕೂ ವರ್ಚುಯಲ್ ಟ್ರಾವೆಲ್ ಏನು ಹೊಸತಲ್ಲ, ಶತಮಾನಗಳಿಂದಲೂ ಕತೆ ಹೇಳುವವರು, ಟ್ರಾವೆಲ್ ರೈಟರ್ಸ್ ಹಾಗೂ ಕಲಾವಿದರ ಪ್ರವಾಸದ ಅನುಭವ, ವರ್ಣನೆಯನ್ನು ಮನೆಯ ಕುರ್ಚಿಯಲ್ಲೇ ಕುಳಿತು ಅನುಭವಿಸುವುದು ನಡೆದುಕೊಂಡೇ ಬಂದಿದೆ. ಇದು ನಮ್ಮ ಬೌದ್ಧಿಕ ಮಟ್ಟವನ್ನು ಮಾತ್ರವಲ್ಲ, ಕಲ್ಪನಾ ಜಗತ್ತನ್ನೂ ವಿಸ್ತರಿಸುತ್ತಿತ್ತು. ತದನಂತರದಲ್ಲಿ ವಿಡಿಯೋಗಳನ್ನು, ಫೋಟೋಗಳನ್ನು ನೋಡಿ, ಕತೆ ಕೇಳಿ ಎಂಜಾಯ್ ಮಾಡುತ್ತಿದ್ದವು. ಇಲ್ಲಿ ಸ್ವಲ್ಪ ರಿಯಾಲಿಟಿಗೆ ಹತ್ತಿರಾದೆವು. ಈಗ ಇದೆಲ್ಲದಕ್ಕಿಂತ ಗಾಢ ಅನುಭವ ಕೊಡುವ, ಬಯಸಿದ ಸ್ಥಳದಲ್ಲೇ ನಿಂತು ನೋಡುತ್ತಿರುವಂತೆ, ಬೀಚ್ ಬದಿ ನಡೆದುಕೊಂಡು ಹೋಗುತ್ತಿರುವಂತೆ, ದೂರದ ಅಮೇಜಾನ್ ಕಾಡಿನ ನಡುವೆ ಟ್ರೆಕಿಂಗ್ ಮಾಡುವಂತೆ, ಇಟಲಿಯ ಗುಹೆಯೊಂದರಲ್ಲಿ ಅಡ್ಡಾಡುತ್ತಿರುವಂತೆ- ಇಷ್ಟ ಬಂದ ಜಾಗದಲ್ಲಿ ಇಷ್ಟ ಬಂದಾಗ ನಿಂತು ವಿಹರಿಸುವಂಥ ತಂತ್ರಜ್ಞಾನ ಸೃಷ್ಟಿಯಾಗುತ್ತಿದೆ. ಇದೇ ವರ್ಚುಯಲ್ ಟ್ರಾವೆಲ್. ಈ ಕುರಿತು ಈಗಾಗಲೇ ಹಲವು ಬೆಳವಣಿಗೆಗಳು ನಡೆದಿದ್ದರೂ ಭವಿಷ್ಯದಲ್ಲಿ ಈ ಕ್ಷೇತ್ರ ಬೃಹತ್ ಮಟ್ಟಕ್ಕೆ ಅಭಿವೃದ್ಧಿ ಕಾಣಲಿದೆ ಎಂಬುದು ಟ್ರಾವೆಲ್ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿರುವ ಮಾತು. 


ಈಗಾಗಲೇ ಹಲವಾರು ವಿಆರ್ ಟೂರ್ ಅನುಭವ ನೀಡುವಂಥ ಟ್ರಾವೆಲ್ ಆ್ಯಪ್ಸ್, ಹೆಡ್‌ಗಿಯರ್‌ಗಳು ಮಾರುಕಟ್ಟೆಗೆ ಬಂದಿವೆ. ಯಾವ ಬಟನ್ ಒತ್ತುವುದೂ ಬೇಡ, ಕಣ್ಣು ತಿರುಗಿಸಿದರೆ ಸಾಕು, ಯಾವ ಸ್ಥಳದಲ್ಲಿ ನಿಂತು ನೋಡಬೇಕೆಂದು ಆಯ್ಕೆ ಮಾಡಿದ್ದೀರೋ ಅಲ್ಲಿ ಸುತ್ತಾಡಿ ಬರಬಹುದು. 


ಇತ್ತೀಚಿನ ದಶಕಗಳಲ್ಲಷ್ಟೇ ಟ್ರಾವೆಲ್ ಇಂಡಸ್ಟ್ರಿ ಪೂರ್ತಿ ಬೂಮ್‌ನಲ್ಲಿದೆ. ಮಧ್ಯಮವರ್ಗಗಳಿಗೂ ಕೈಗೆಟುಕುವ ವಿಮಾನದರಗಳು, ಜಗತ್ತಿನ ಮೂಲೆಮೂಲೆಯನ್ನೂ ತಲುಪಿದ ಸಾರಿಗೆ ವ್ಯವಸ್ಥೆ, ಜಾಗತೀಕರಣ ಮುಂತಾದ ಕಾರಣಗಳಿಂದಾಗಿ 2018ರಲ್ಲಿ ಟ್ರಾವೆಲ್ ಹಾಗೂ ಟೂರಿಸಂ ಬಿಸ್ನೆಸ್ ಶೇ.4ರಷ್ಟು ಚೇತರಿಕೆ ಕಂಡು ಜಾಗತಿಕ ಜಿಡಿಪಿಯ ಶೇ.10ಕ್ಕಿಂತ ಹೆಚ್ಚು ಭಾಗವನ್ನು ಆವರಿಸಿಕೊಂಡಿತ್ತು. ಆದರೆ, ಪ್ರಸಿದ್ಧ ಪ್ರವಾಸಿ ತಾಣಗಳು ಅತಿಯಾಗಿ ಜನನಿಬಿಡವಾಗಿ ಸೌಂದರ್ಯ ಕಳೆದುಕೊಳ್ಳುತ್ತಿರುವುದು, ಮಕ್ಕಳು ವಯಸ್ಸಾದವರಿಗೆ ತಿರುಗಾಟ ಕಷ್ಟಸಾಧ್ಯವಾಗಿರುವುದು, ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರಿಗೂ ಕೈಗೆಟುಕುವಂತಾಗುವ ನಿಟ್ಟಿನಲ್ಲಿ ಜಗತ್ತನ್ನು ಅನುಭವಿಸಲು ಬದಲಿ ಮಾರ್ಗಗಳ ಅನ್ವೇಷಣೆ ನಿರಂತರವಾಗಿ ಇದ್ದೇ ಇದೆ. ಅದಕ್ಕೆ ಪೂರಕವಾಗಿ ವರ್ಚುಯಲ್ ಟ್ರಾವೆಲ್ ಎಂಬುದು ನಿಲ್ಲುತ್ತದೆ. 

ಟೂರಿಸಂ ಕಡೆ ವಾಲುತ್ತಿದೆ ಯುವಕರ ಮನಸ್ಸು

ಜಪಾನ್‌ನಲ್ಲಿ ಆರಂಭವಾಗಿದೆ...
ಜಪಾನ್ ಫಸ್ಟ್ ಏರ್ಲೈನ್ಸ್ ಕಂಪನಿಯು ಟೋಕಿಯೋದಲ್ಲಿ ತನ್ನ ವಿಮಾನದ ಮಾಕ್-ಅಪ್ ಸಿದ್ಧವಿರಿಸಿದ್ದು, ಇದರೊಳಗೆ ಗ್ರಾಹಕರು ಕುಳಿತು ಕೆಲವೊಂದು ತಾಣಗಳಿಗೆ ವರ್ಚುಯಲ್ ಪ್ರವಾಸ ಕೈಗೊಳ್ಳುವ ವ್ಯವಸ್ಥೆ ಮಾಡಿದೆ. ಇಲ್ಲಿ ಗ್ರಾಹಕರಿಗೆ ಕುಳಿತಲ್ಲೇ ಆಹಾರವನ್ನು ಕೂಡಾ ಸರಬರಾಜು ಮಾಡಲಾಗುತ್ತದೆ. ಕಂಪನಿಯು ದೂರ ಪ್ರವಾಸ ಮಾಡಲಾಗದ, ಹೆಚ್ಚು ಸಮಯ ವಿಮಾನದಲ್ಲಿ ಕುಳಿತುಕೊಳ್ಳಲಾಗದ, ವಯಸ್ಸಾದ ನಾಗರಿಕರಿಗೆ ಪ್ರಾಶಸ್ತ್ಯ ನೀಡುತ್ತಿದೆ. 

ಇನ್ನು ಎಎನ್‌ಎ ಕಂಪನಿಯು ರೋಬೋಟಿಕ್ಸ್, ಹಾಪ್ಟಿಕ್ ತಂತ್ರಜ್ಞಾನ, ಫಾಸ್ಟ್ ಕಮ್ಯೂನಿಕೇಶನ್ ಬಳಸಿ, ದೂರದ ಸ್ಥಳಗಳಲ್ಲಿ ಜನ ತಮ್ಮ ಇರುವಿಕೆ ಅನುಭವಿಸುವಂತೆ ಮಾಡಲು ಸಿದ್ಧವಾಗುತ್ತಿದೆ. ಇಲ್ಲಿ ಸ್ಪರ್ಶದಿಂದ ಹಿಡಿದು ಪ್ರತಿಯೊಂದು ಕೂಡಾ ಅಲ್ಲಿಯೇ ಇರುವ ಫೀಲ್ ಕೊಡಲಿದೆ. ಸಧ್ಯದಲ್ಲೇ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಎರಡೂ ಬದಿಗೆ ಇರುವವರು ಶೇಕ್ ಹ್ಯಾಂಡ್ ಮಾಡಲು ಸಾಧ್ಯವಾಗುವಂಥ ತಂತ್ರಜ್ಞಾನ ಬರಲಿದೆ. ಇದನ್ನೇ ವರ್ಚುಯಲ್ ಟ್ರಾವೆಲ್‌ನಲ್ಲಿ ಕೂಡಾ ಬಳಸುವ ಐಡಿಯಾ ಚಾಲ್ತಿಯಲ್ಲಿದೆ. 

ಜಗತ್ತಿನ ಟಾಪ್ 10 ಹಾಟ್ ಸ್ಪಾಟ್

ಒಟ್ಟಿನಲ್ಲಿ ಹಿಂದಿನ ಕಲ್ಪನಾ ಕತೆಗಳಲ್ಲಿದ್ದ, ಮನಸ್ಸಿನಲ್ಲಿ ಯೋಚಿಸಿದರೆ ಸಾಕು ಆ ಸ್ಥಳಕ್ಕೆ ಮಾಯವಾಗಿ ಹೋಗುವ, ಕಿನ್ನರರು, ದೇವತೆಗಳು, ಅಪ್ಸರೆಯರು ಮುಂತಾದವರ ಜಾಗದಲ್ಲಿ ನಾವು ಕೂಡಾ ನಿಲ್ಲುವ ಸಮಯ ದೂರವಿಲ್ಲ. 

Follow Us:
Download App:
  • android
  • ios