ಇನ್ನು ಎಟಿಎಂ ಮಾದರಿ ಯಂತ್ರದಲ್ಲೇ ಮೊಬೈಲ್ ಸಿಗುತ್ತೆ!
ಇನ್ನು ಎಟಿಎಂ ಮಾದರಿ ಯಂತ್ರದಲ್ಲೇ ಮೊಬೈಲ್ ಸಿಗುತ್ತೆ!| ಡೆಬಿಟ್, ಕ್ರೆಡಿಟ್, ಯುಪಿಐ, ನಗದು ನೀಡಿ ಮೊಬೈಲ್ ಖರೀದಿಸಿ| ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಕಿಯೋಸ್ಕ್ ವಿತರಣಾ ಯಂತ್ರ
ನವದೆಹಲಿ[ಮೇ.14]: ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಲ್ಲಿ ಹಣ ತೆಗೆಯುವುದು, ಮಾಲ್‌ಗಳಲ್ಲಿ ಶಾಪಿಂಗ್ ಮಾಡೋದು ಗೊತ್ತು. ಆದರೆ, ಇನ್ನು ಮುಂದಿನ ದಿನಗಳಲ್ಲಿ ಭಾರತೀಯ ನಾಗರಿಕರು ‘ಎಂಐ ಎಕ್ಸ್‌ಪ್ರೆಸ್ ಕಿಯೋಸ್ಕ್’ ವಿತರಣಾ ಯಂತ್ರಗಳ ಮೂಲಕ ಕ್ಸಿಯೋಮಿ ಸ್ಮಾರ್ಟ್‌ಫೋನ್ ಹಾಗೂ ಮೊಬೈಲ್ ಬಿಡಿಭಾಗಗಳನ್ನು ಖರೀದಿಸಬಹುದಾಗಿದೆ. ಹೌದು, ಮುಂದಿನ ಕೆಲವು ತಿಂಗಳುಗಳಲ್ಲೇ ಭಾರತದ ಮೆಟ್ರೋ ನಗರಗಳ ಏರ್‌ಪೋರ್ಟ್, ಮೆಟ್ರೋ ನಿಲ್ದಾಣ, ಶಾಪಿಂಗ್ ಮಾಲ್ ಸೇರಿದಂತೆ ಇನ್ನಿತರ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್ ವಿತರಣಾ ಯಂತ್ರಗಳನ್ನು ಸ್ಥಾಪಿಸಲು ಚೀನಾದ ಮೊಬೈಲ್ ಕಂಪನಿ ಮುಂದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಪಾರುಪತ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದ ಮೊಬೈಲ್ ಉತ್ಪಾದಕ ಕಂಪನಿಯಾದ ಕ್ಸಿಯೋಮಿ ಈ ಯೋಜನೆ ರೂಪಿಸಿದೆ.
ಮೊಬೈಲ್ ಖರೀದಿ ಹೇಗೆ?
‘ಎಂಐ ಎಕ್ಸ್‌ಪ್ರೆಸ್ ಕಿಯೋಸ್ಕ್’ ಎಂಬ ವಿತರಣಾ ಯಂತ್ರಗಳಲ್ಲಿ ಗ್ರಾಹಕರು ತಮಗೆ ಬೇಕಾದ ಮೊಬೈಲ್‌ಗಳನ್ನು ಖರೀದಿಸಬಹುದಾಗಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಡೆಬಿಟ್, ಕ್ರೆಡಿಟ್, ನಗದು ಹಾಗೂ ಯುಪಿಐ ಕೋಡ್ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಮಾರ್ಟ್‌ಫೋನ್ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರ 200 ಮೊಬೈಲ್‌ಗಳನ್ನು ತನ್ನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಗತ್ಯಬಿದ್ದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಕಿಯೋಸ್ಕ್‌ಗಳ ನಿರ್ವಹಣೆಗೆ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.
ಕಿಯೋಸ್ಕ್ ಯೋಜನೆ ಹೊಳೆದದ್ದು ಹೇಗೆ?
2014ರಿಂದ ಭಾರತದಲ್ಲಿ ಆನ್‌ಲೈನ್ ಮೂಲಕ ಕ್ಸಿಯೋಮಿ ತನ್ನ ವಹಿವಾಟು ಆರಂಭಿಸಿತು. ಆದರೆ, ಭಾರತದಲ್ಲಿ ಮಾರಾಟವಾದ ಒಟ್ಟಾರೆ ಕ್ಸಿಯೋಮಿ ಮೊಬೈಲ್‌ಗಳ ಪೈಕಿ ಶೇ.50ರಷ್ಟುಮೊಬೈಲ್‌ಗಳು ರಿಟೇಲರ್ ಅಂಗಡಿಗಳಲ್ಲೇ ಮಾರಾಟವಾಗುತ್ತಿವೆ. ಇದೇ ಕಾರಣಕ್ಕಾಗಿಯೇ, ಭಾರತದಲ್ಲಿ ಎಂಐ ಎಕ್ಸ್‌ಪ್ರೆಸ್ ಕಿಯೋಸ್ಕ್ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಅಗತ್ಯವಾಯಿತು. ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರ ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಕ್ಸಿಯೋಮಿ ಮೊಬೈಲ್ ಸಂಸ್ಥೆ ಹೇಳಿದೆ.