ನಮ್ಮ ಬಳಿ ಎಲ್ಲವೂ ಇದೆ; ಬಳಸುವುದಕ್ಕೆ ಸಮಯ ಮಾತ್ರ ಇಲ್ಲ!

ನನ್ನ ಬಳಿ ಹದಿನೈದು ಸಾವಿರ ಪುಸ್ತಕಗಳಿವೆ, ಐದು ಸಾವಿರ ಸಿನಿಮಾಗಳಿವೆ, ನೆಟ್‌ಫ್ಲಿಕ್ಸ್‌ ಇದೆ, ಅಮೆಜಾನ್‌ ಇದೆ, ನಾಲ್ಕು ಮನೆಯಿದೆ, ಸಾವಿರಾರು ಎಕರೆ ಆಸ್ತಿಯಿದೆ, ಮನೆಯಲ್ಲಿ ಐದು ಟೀವಿಯಿದೆ, ಎರಡೆರಡು ಹೋಮ್‌ ಥೇಟರ್‌ ಇದೆ! ಅದೆಲ್ಲ ಸರಿ, ಆಯಸ್ಸೆಲ್ಲಿದೆ? ಪುರಸೊತ್ತೆಲ್ಲಿದೆ? ನಿದ್ದೆಯೆಲ್ಲಿದೆ? ಇರುವುದು ಮತ್ತು ಇಲ್ಲದೇ ಇರುವುದರ ನಡುವೆ ಏನಾದರೂ ವ್ಯತ್ಯಾಸ ಇದೆಯೇ?

writer Narendra Pai talks about importance of technology with lack of time

- ನರೇಂದ್ರ ಪೈ

ನಮಗೆಷ್ಟುಭೂಮಿ ಬೇಕು - ಟಾಲ್‌ಸ್ಟಾಯ್‌ ಅವರ ಜನಪ್ರಿಯ ಕೃತಿ. ನಮಗೆಷ್ಟುಪುಸ್ತಕ ಬೇಕು ಎಂದು ಕೇಳಿಕೊಳ್ಳುವ ಹೊತ್ತಲ್ಲಿ ಇದು ಮತ್ತೆ ಮತ್ತೆ ನೆನಪಾಗುತ್ತದೆ. ಒಂದು ಕನ್ನಡ ಸಿನಿಮಾದಲ್ಲಿನ ದೃಶ್ಯ ಇದು: ಉಳುವ ರೈತರೆಲ್ಲ ಸೇರಿ ತಮಗೆ ತಮ್ಮದೇ ಆದ ಭೂಮಿ ಬೇಕು ಎಂದು ಹಠ ಹಿಡಿಯುತ್ತಾರೆ. ಜಮೀನ್ದಾರ ‘ಅದಕ್ಕೇನಂತೆ, ನಾಳೆ ಹೊತ್ತು ಮೂಡುವ ಮುನ್ನ ಬನ್ನಿ, ಎಲ್ಲರಿಗೂ ಎಷ್ಟುಬೇಕೋ ಅಷ್ಟುಭೂಮಿ ಅಳೆದು ಕೋಡೋಣಂತೆ’ ಎನ್ನುತ್ತಾನೆ. ಮರುದಿನ ನಸುಗತ್ತಲಿರುವಾಗಲೇ ಸೇರಿದ ರೈತರಿಗೆಲ್ಲ ಒಂದೊಂದು ಧ್ವಜ ಕೊಟ್ಟು ಅದನ್ನವರು ಎಷ್ಟುದೂರ ನೆಟ್ಟು ಬರುತ್ತಾರೋ ಅಷ್ಟೂಭೂಮಿ ಅವರದೇ ಆಗುತ್ತದೆ, ಆದರೆ ಹೊತ್ತು ಮುಳುಗುವ ಮುನ್ನ ವಾಪಾಸಾದರೆ ಮಾತ್ರ ಎಂದು ವಿಧಿಸುತ್ತಾನೆ. ಎಲ್ಲರೂ ಓಡತೊಡಗುತ್ತಾರೆ. ನಿಮಗೆ ಈ ಕತೆ ಗೊತ್ತು, ಟಾಲ್‌ಸ್ಟಾಯ್‌ ಬರೆದ ಕತೆಯೇ ಇದು. ಎಲ್ಲರೂ ಹಿಂದಿರುಗಲಾರದಷ್ಟುದೂರ ಓಡಿರುತ್ತಾರೆ, ಧ್ವಜ ಊರಿ ಮರಳಿ ಹೊರಟಲ್ಲಿಗೆ ಬಂದು ತಲುಪುವ ಕಸುವು ಯಾರಲ್ಲಿಯೂ ಉಳಿದಿರುವುದಿಲ್ಲ. ಮಾಸ್ತಿಯವರು ಬರೆದ ‘ಟಾಲ್‌ಸ್ಟಾಯ್‌ ಮಹರ್ಷಿಯ ಭೂರ್ಜ ವೃಕ್ಷಗಳು’ ಕತೆಯನ್ನು ತೆರೆದು ಓದಿ. ಅಸಂಗ್ರಹ ಒಂದು ಬೌದ್ಧ ತತ್ವ. ದಾನ ಎಲ್ಲಾ ಧರ್ಮಗಳೂ ಎತ್ತಿ ಹಿಡಿದಿರುವ ತತ್ವ. ಟಾಲ್‌ಸ್ಟಾಯ್‌ ‘ಇಲ್ಲಿ ಯಾವುದೂ ತನ್ನದಲ್ಲ’ ಎಂದು ದಾನ ನೀಡ ತೊಡಗಿದಂತೆ ಆತನ ಅತ್ಯಂತ ಪ್ರಿಯ ಭೂರ್ಜವನದ ಮರಗಳನ್ನು ಅವನೆದುರೇ ಕಡಿದು ಸಾಗಿಸುವ ಮಂದಿ ಹುಟ್ಟಿಕೊಳ್ಳುತ್ತಾರೆ. ಪತಿಯ ಸಂಕಟ ಸಹಿಸಲಾರದೆ ಅವರನ್ನು ತಡೆಯಲು ವಿಫಲ ಪ್ರಯತ್ನವೊಂದನ್ನು ನಡೆಸಿದ ಪತ್ನಿಯನ್ನು ಟಾಲ್‌ಸ್ಟಾಯ್‌ ಸುಮ್ಮನೇ ನೋಡುತ್ತ ಉಳಿಯುತ್ತಾನೆ. ಕೊನೆಗೆ ಸಹಿಸಲಾರದ ನೋವಿನೊಂದಿಗೆ ದೇಶಾಂತರ ಹೋದ ಮಹರ್ಷಿ ರೈಲ್ವೇ ಸ್ಟೇಶನ್ನೊಂದರಲ್ಲಿ ಕೊನೆಯುಸಿರೆಳೆಯುತ್ತಾನೆ. ಮಾಸ್ತಿ ನಮ್ಮನ್ನು ಕೇಳುತ್ತಾರೆ, ‘ಮರ ಹೋದವೆಂಬ ದುಃಖವೇ? ಹೆಂಡತಿ ತನ್ನ ಔದಾರ್ಯಕ್ಕೆ ಅಡ್ಡಿ ಆದಳೆಂಬ ಬೇಸರವೆ? ಸ್ವಾಮ್ಯ ಕೂಡದೆಂದು ಬುದ್ಧಿ ಹೇಳುತ್ತಿರುವಲ್ಲಿ ಮರ ತನ್ನದೆಂಬ ಅಭಿಮಾನ ಕಾಡಿತೆಂಬ ಉದ್ವೇಗವೇ? ಅವನ ಜೀವ ಈ ಭಾವ ಯಾವುದರಲ್ಲಿ ತೊಳಲುತ್ತ ಮುಗಿಯಿತು? ಇಲ್ಲ ಮೂರೂ ಭಾವ ಆ ಮನಸ್ಸಿನಲ್ಲಿ ಸಾಯುವ ವೇಳೆ ತುಮುಲ ಮಾಡಿದವೋ?’

‘ಇದನ್ನು ಈಗ ಯಾರೂ ಹೇಳುವಂತಿಲ್ಲ.’

ಇದು ಬರಿ ಪುಸ್ತಕದ ಮಾತಲ್ಲ. ರೇಡಿಯೋ ಬಂತು, ಅದು ಹೋಗಿ ಟೀವಿ ಬಂತು. ಮೊಬೈಲ್‌ ಬಂತು. ಇಂಟರ್ನೆಟ್‌ ಸೋವಿಯಾಯಿತು. ಫೇಸ್‌ಬುಕ್ಕು, ಟ್ವಿಟರು, ವ್ಯಾಟ್ಸಪ್ಪು, ಇನ್‌ಸ್ಟಾಗ್ರಾಮು, ಗ್ರೂಪ್‌ ಚಾಟು ಚಾಳಿಗಳಾದವು. ಬ್ಲೂ-ರೇ ತಳವೂರುವ ಮೊದಲೇ ನೆಟ್‌ಫಿಕ್ಸು, ಫೈರ್‌ ಟೀವಿಗಳು ಅದಾಗಲೇ ಇದ್ದ ಸಾವಿರಾರು ಚಾನೆಲ್ಲುಗಳ ಜೊತೆ ಎಚ್ಡೀ ನೋಡಿ, ಅಲ್ಟಾ್ರ ಎಚ್ಡಿ ನೋಡಿ ಎನ್ನತೊಡಗಿದವು. ಮನುಷ್ಯ ನಿದ್ದೆಯನ್ನೇ ಮಾಡದೆ ನಿದ್ದೆ ಕೊಡಬಹುದಾದ ವಿಶ್ರಾಂತಿ, ಪಚನಕ್ರಿಯೆ ಮತ್ತು ಮಾನಸಿಕ ಸ್ವಾಸ್ಥ್ಯ ಮೂರೂ ವರ ಕೊಡಬಲ್ಲ ಟ್ಯಾಬ್ಲೆಟ್ಟು ಕಂಡು ಹಿಡಿಯುತ್ತಾನೆ. ಆದರೆ ಅವನಿಗೆ ಆಗಲೂ ಆ 24 ಗಂಟೆಗಳು ಸಾಲುವುದಿಲ್ಲ. ಅಷ್ಟೇಕೆ, ಅವನು ಅಮರತ್ವಕ್ಕಾಗಿ ಪುರಾಣ ಕಾಲದ ರಾಕ್ಷಸರಂತೆ ತಪಸ್ಸು ಮಾಡುವ ದಿನ ಖಂಡಿತ ದೂರವಿಲ್ಲ. ಆದರೆ ಇವರ ನಡುವೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಏಕೆ ಏರುತ್ತಿದೆ?

ಬರೀ ಪುಸ್ತಕದ ವಿಚಾರಕ್ಕೆ ಬಂದರೆ, ನಮ್ಮ ಬಳಿ ಒಂದು ನಿರ್ದಿಷ್ಟಸಂಖ್ಯೆಯ ಪುಸ್ತಕಗಳಷ್ಟೇ ಇರುವಾಗ, ನಾವು ಲೈಬ್ರರಿಯಿಂದ ತಂದ ಪುಸ್ತಕಗಳನ್ನಷ್ಟೇ ಓದುವ ಅಭ್ಯಾಸ ಇಟ್ಟುಕೊಂಡಿರುವಾಗ ಸರಳ ಅನಿಸುವ ಸಂಗತಿಗಳೇ ನಮ್ಮದೇ ಒಂದು ಪುಸ್ತಕ ಸಂಗ್ರಹ ನಿರ್ಮಾಣವಾಗುತ್ತಿದ್ದಂತೆ ಜಟಿಲಗೊಳ್ಳುವುದು ಸ್ವಾರಸ್ಯಕರ. ಸದ್ಯದಲ್ಲೇ ಓದಿ ಮುಗಿಸಬಹುದಾದಷ್ಟೇ ಪುಸ್ತಕಗಳನ್ನು ಕೊಳ್ಳುತ್ತ, ಕೊಂಡವುಗಳನ್ನು ಶಿಸ್ತಾಗಿ ಓದಿ ಬದಿಗಿರಿಸುತ್ತ ಬರುವುದು ಇಂದಿನ ದಿನಗಳಲ್ಲಿ ಕಷ್ಟ. ಇವತ್ತು ತಿಂಗಳೊಂದರಲ್ಲಿ ಹೊರಬರುವ ಪುಸ್ತಕಗಳ ಸಂಖ್ಯೆಗೂ, ಅದೇ ತಿಂಗಳೊಂದರಲ್ಲಿ ನಾವು ಓದಬಹುದಾದ ಪುಸ್ತಕಗಳ ಸಂಖ್ಯೆಗೂ ಓದಿನ ಮಿತಿಗೆ ಒಗ್ಗುವ ಅನುಪಾತವೊಂದು ಸಾಧ್ಯವಿಲ್ಲ. ಕೊಂಡವುಗಳನ್ನು ಓದಿ ಮುಗಿಸದೇ ಹೊಸ ಪುಸ್ತಕಗಳನ್ನು ಕೊಳ್ಳುವುದಿಲ್ಲ ಎಂಬ ನಿಯಮವನ್ನೆಲ್ಲ ಪಾಲಿಸಲೂ ಸಾಧ್ಯವಿಲ್ಲ. ನಮ್ಮ ಅಕ್ಕಪಕ್ಕದ ಪುಸ್ತಕ ವ್ಯಾಪಾರಿಗಳು ತಕ್ಷಣ ಮಾರಿ ಹೋಗಬಹುದಾದಷ್ಟೇ ಪ್ರತಿಗಳನ್ನು ತರಿಸಿಕೊಳ್ಳುವುದರಿಂದ ಮತ್ತು ಪ್ರಕಾಶಕರು ತಕ್ಷಣ ಮಾರಿ ಹೋಗುವಷ್ಟೇ ಪ್ರತಿಗಳನ್ನು ಅಚ್ಚುಹಾಕುವುದರಿಂದ, ಹೊಸ ಪುಸ್ತಕಗಳು ಕೂಡ ಬಹುಬೇಗ ಔಟ್‌ ಆಫ್‌ ಸ್ಟಾಕ್‌ ಆಗಿಬಿಡುತ್ತವೆ. ಹಾಗಾಗಿ, ಮುಖ್ಯ ಎನಿಸಿದರೆ ಅಂಥ ಕೃತಿಗಳನ್ನು ತಕ್ಷಣವೇ ಖರೀದಿಸಿಟ್ಟುಕೊಳ್ಳಬೇಕಾದ್ದು ಅನಿವಾರ್ಯವಾಗುತ್ತದೆ. ಕ್ರಮೇಣ ಹೀಗೆ ಕೊಂಡ ಕೃತಿಗಳು ಮತ್ತು ಆಗಲೇ ಇರುವ ಕೃತಿಗಳು ತಮ್ಮ ತಮ್ಮ ಸರದಿಗಾಗಿ ಕಾಯತೊಡಗುತ್ತವೆ. ಅತ್ತ ಒಳ ಹರಿವು ಹೆಚ್ಚುತ್ತಲೇ ಹೋಗುತ್ತದೆ ಮತ್ತು ಇತ್ತ ಓದು ಆಯ್ಕೆಗಳ ಎದುರು ಕಂಗಾಲಾಗುವಂತೆ ಕಾಣಿಸುತ್ತದೆ.

ಮೊನ್ನೆ ನನಗೊಂದು ಈಮೇಲ್‌ ಬಂತು. ನ್ಯೂಯಾರ್ಕ್ನ ಪ್ರತಿಷ್ಠಿತ ಮಾಡರ್ನ್‌ ಲೈಬ್ರರಿ ಕಳಿಸಿದ ಈ ಮೇಲ್‌ನಲ್ಲಿ ಆರು ಬಗೆಯ ‘ಓದಲೇ ಬೇಕಾದ’ ಪುಸ್ತಕಗಳ ಪಟ್ಟಿಯ ಉಲ್ಲೇಖ, ಕೊಂಡಿ ಇತ್ತು. ಒಂದೊಂದು ಕೊಂಡಿಯೂ ಅತ್ಯುತ್ತಮ ನೂರು ಪುಸ್ತಕಗಳ ಪಟ್ಟಿಯನ್ನು ನಮ್ಮೆದುರು ತೆರೆಯುತ್ತದೆ. ತುಂಬ ಹಿಂದೆ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಯಾವುದೇ ಶಿಸ್ತಿಗೆ ಅಗತ್ಯವಾದ ನಿರಂತರ ಪರಿಶ್ರಮ ಮತ್ತು ತರಬೇತಿಗಳೂ ಒಬ್ಬ ಬರಹಗಾರನಾಗುವುದಕ್ಕೆ ಅನಿವಾರ್ಯವಲ್ಲ ಎನ್ನುವುದರ ಬಗ್ಗೆ ವಿವೇಕ ಶಾನಭಾಗ ಅವರೊಂದಿಗೆ ಮಾತನಾಡುವಾಗ, ಅವರು ಒಂದು ಸಲಹೆಯಾಗಿ ಕನಿಷ್ಠ ನೂರು ಮಂದಿ ಬರಹಗಾರರನ್ನು ತುದಿಯಿಂದ ತುದಿತನಕ ಓದಿಕೊಂಡಿರಬೇಕು ಎಂದಿದ್ದರು. ಆದರೆ ಆ ನೂರು ಮಂದಿ ಕನ್ನಡದ ಲೇಖಕರೇ ಆಗಿರಬೇಕೆಂದೇನೂ ಅವರು ಹೇಳಿದಂತಿಲ್ಲ. ಭಾರತದ ಹಿಂದಿ, ತಮಿಳು, ಮಲಯಾಳ, ತಮಿಳು, ಮರಾಠಿ, ಬಂಗಾಳಿ, ಪಂಜಾಬಿ, ಒಡಿಯಾ ಎಂದೆಲ್ಲ ಹತ್ತಾರು ಭಾಷೆಯ ಅತ್ಯುತ್ಕೃಷ್ಟಕೃತಿಗಳು ಕನ್ನಡದಲ್ಲಿ, ಇಂಗ್ಲೀಷಿನಲ್ಲಿ ಲಭ್ಯವಿವೆ. ಅಂತರ್ರಾಷ್ಟ್ರೀಯವಾಗಿ ತೆರೆದುಕೊಂಡರೆ ‘ಸಾಯುವ ಮುನ್ನ ಓದಲೇ ಬೇಕಾದ 1000 ಕೃತಿಗಳು’ ಮುಂತಾದ ಪಟ್ಟಿಗಳು ಪುಂಖಾನುಪುಂಖ ಸಿಗುತ್ತ ಹೋಗುತ್ತವೆ. ನೊಬೆಲ್‌, ಪುಲಿಟ್ಜರ್‌, ಬುಕರ್‌ ಮುಂತಾದ ಪ್ರಶಸ್ತಿ ವಿಜೇತ ಕೃತಿಗಳ ಸಂಖ್ಯೆಯೇ ಸಾಕಷ್ಟಿದೆ.

ಗದ್ಯ, ಪದ್ಯ, ನಾಟಕ, ಕತೆ, ಕಾದಂಬರಿ, ಸೃಜನ-ಸೃಜನೇತರ ಎಂಬ ವರ್ಗೀಕರಣ ಬಿಡಿ, ಪಾತ್ರ (ಅದರ ಜಾತಿ/ವರ್ಗ/ವಯಸ್ಸು/ಲಿಂಗ/ಲೈಂಗಿಕ ಹವ್ಯಾಸ), ವಸ್ತು (ಸಂಘರ್ಷಮಯ/ಸಂಕೀರ್ಣ/ರೋಮಾಂಚಕ/ಮುಕ್ತಛಂದ/ತಾತ್ವಿಕ/ಚಾರಿತ್ರಿಕ/ಐತಿಹಾಸಿಕ/ತಲೆಮಾರುಗಳ ಕಥನ), ಕಥಾನಕ ಜರುಗುವ ಸ್ಥಳ (ಹಳ್ಳಿ/ನಗರ/ಮೆಟ್ರೊ/ಕಾಡು/ಸಾಗರ), ಕಥಾನಕದ ಕಾಲಘಟ್ಟ(ಪುರಾಣ/ಇತಿಹಾಸ/ವರ್ತಮಾನ/ಭವಿಷ್ಯತ್‌) ಎನ್ನುವ ಸ್ಥೂಲ ವರ್ಗೀಕರಣವೂ ಸೇರಿದಂತೆ, ಸಂತಸ ನೀಡುವ, ಬೇಸರದ, ತಮಾಷೆಯ, ಹಾಸ್ಯದ, ವಿಡಂಬನೆಯ, ಗಂಭೀರವಾದ, ಬಹುಕಾಲ ಕಾಡುವ, ಅನಿರೀಕ್ಷಿತಗಳ, ಕಟುವಾಸ್ತವದ, ಕಾಲ್ಪನಿಕವಾದ, ಸುಂದರ ರಮ್ಯ, ಮಣ್ಣಿನವಾಸನೆಯ, ಹದವರಿತ-ಹಿತವಾದ ಅನುಭವ ಕೊಡುವ, ಹೆಚ್ಚಿನ ಏಕಾಗ್ರತೆ ಬಯಸುವ, ಕ್ರೌರ್ಯ ಮತ್ತು ಹಿಂಸಾತ್ಮಕವಾದ, ಲೈಂಗಿಕತೆಯಿರುವ, ಸಾಂಪ್ರದಾಯಿಕವಾದ, ನಿರಾಶಾವಾದಿಯಾದ, ಆಶಾವಾದಿಯಾದ, ಉತ್ಸಾಹ ಹುಟ್ಟಿಸುವಂಥ, ಪುಟ್ಟಗಾತ್ರದ, ಭಾರೀ ದೀರ್ಘವಾದ ಎಂದೆಲ್ಲ ಪುಸ್ತಕಗಳನ್ನು ವರ್ಗೀಕರಿಸಿ ನಿಮ್ಮ ಅಭಿರುಚಿಗೆ ಅತ್ಯಂತ ಸೂಕ್ತವಾಗಿ ಹೊಂದುವ ಟೈಲರ್‌ ಮೇಡ್‌ ಪುಸ್ತಕ ಯಾವುದು, ಕೈಯಲ್ಲಿರುವ ಪುಸ್ತಕ ಮುಗಿಯುತ್ತಲೇ ನೀವು ಓದಬೇಕಾದ ಮುಂದಿನ ಪುಸ್ತಕ ಯಾವುದು ಎನ್ನುವುದನ್ನೆಲ್ಲ ಸೂಚಿಸುವ ವೆಬ್‌ಸೈಟುಗಳು ಕೂಡ ಇವತ್ತು ಸಿಗುತ್ತವೆ.

ನಿಮಗೆ ಹೆಚ್ಚು ಹೆಚ್ಚು ಭಾಷೆಗಳು ಬಂದಂತೆಲ್ಲ ಸಮಸ್ಯೆ ಮತ್ತಷ್ಟುಬಿಗಡಾಯಿಸುವಂತೆ ಕಾಣುತ್ತದೆ. ಇವತ್ತು ಸಬ್‌ ಟೈಟಲುಗಳ ನೆರವಿನಿಂದ ಜಗತ್ತಿನ ಯಾವುದೇ ಭಾಷೆಯ ಸಿನಿಮಾವನ್ನು ಕೂಡ ನಾವು ಹೆಚ್ಚೇನೂ ನಷ್ಟವಿಲ್ಲದೆ ದಕ್ಕಿಸಿಕೊಳ್ಳುವುದು ಸಾಧ್ಯವಾಗಿದೆ. ಪುಸ್ತಕಗಳ ಮಟ್ಟಿಗೆ ಅನುವಾದದ ಮೇಲೆ ನಾವು ಅವಲಂಬಿತರು. ಆದರೂ ಮನುಷ್ಯನ ಆಯುರ್ಮಾನದಲ್ಲಿ ಒಬ್ಬ ಓದಬಹುದಾದ ಪುಸ್ತಕಗಳ ಸಂಖ್ಯೆ ಎಷ್ಟು? ಇಕೊ ಉಂಬರ್ಟೊ ಹೇಳುವಂತೆ ಅದು ಹೆಚ್ಚೆಂದರೆ 25,200. ಆತನ ಲೆಕ್ಕಾಚಾರ ಹೀಗಿದೆ: ನೀವು ದಿನಕ್ಕೊಂದರಂತೆ ಪುಸ್ತಕಗಳನ್ನು ಓದುವವರಾಗಿದ್ದರೂ ಕೂಡ ವರ್ಷಕ್ಕೆ 365 ಪುಸ್ತಕಗಳನ್ನೂ, ಹತ್ತು ವರ್ಷಗಳಲ್ಲಿ ಸುಮಾರು 3,600 ಪುಸ್ತಕಗಳನ್ನೂ ಓದಬಹುದು ಅಷ್ಟೆ. ನಿಮ್ಮ ಹತ್ತನೆಯ ವಯಸ್ಸಿನಿಂದ ಎಂಭತ್ತರ ಪ್ರಾಯದೊಳಗೆ ಹೀಗೆ ನೀವು ಓದಬಹುದಾದ ಪುಸ್ತಕಗಳು 25,200. ಇದು ತೀರ ಅಲ್ಪ. (ಇh್ಟಟ್ಞಜ್ಚಿ್ಝಛಿs ಟ್ಛ a ಔಜಿಟ್ಠಿಜಿd ಖಟ್ಚಜಿಛಿಠಿy))

ಇಲ್ಲಿ ಮುಖ್ಯವಾದ ಪ್ರಶ್ನೆ, ಎಷ್ಟುಓದುತ್ತೀರಿ ಎನ್ನುವುದಲ್ಲವೇ ಅಲ್ಲ. ಏನನ್ನು ಓದುತ್ತೀರಿ ಮತ್ತು ಹೇಗೆ ಓದುತ್ತೀರಿ ಎನ್ನುವುದು. ಕೈಗೆ ಸಿಕ್ಕಿದ್ದನ್ನೆಲ್ಲ ಓದುವ ಕಾಲ ಮುಗಿದು ಹೋಯಿತು. ತೀರ ಓದಲೇ ಬೇಕಾದ ಕೃತಿ ಎಂದು ನಾವು ವಿಶ್ವಾಸವಿಡಬಹುದಾದ ಮಂದಿ ಹೇಳಿದರೆ ಮಾತ್ರ ಮುಟ್ಟುವ ಧೈರ್ಯ ಮಾಡಬಹುದಾದ ದಿನಗಳು ಎದುರಿಗಿವೆ. ಅದಾಗಲೇ ಇಂಥ ಸಾಕಷ್ಟುಕೃತಿಗಳು ನಮಗೆ ಲಭ್ಯವಿರುತ್ತ, ಅವುಗಳನ್ನು ಓದಬೇಕೆ, ಹೊಸ/ಸಮಕಾಲೀನ ಕೃತಿಗಳತ್ತ ಹೆಚ್ಚಿನ ಗಮನ ಕೊಡಬೇಕೆ ಎನ್ನುವ ಪ್ರಶ್ನೆ ಕೂಡ ವರ್ತಮಾನದ ಹೆಚ್ಚುವರಿ ಸಮಸ್ಯೆ. ಇದರ ಜೊತೆ ಒಂದು ಕೃತಿಯನ್ನು ಪೂರ್ತಿಯಾಗಿ ದಕ್ಕಿಸಿಕೊಳ್ಳಲು ಅದನ್ನು ಹೇಗೆ ಓದಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾದ ಅಂಶ.

ಆರ್ಹಾನ್‌ ಪಮುಕ್‌ ತನ್ನ ಬಹುಪ್ರಸಿದ್ಧ ಕೃತಿ ಅದರ್‌ ಕಲರ್ಸ್‌ನಲ್ಲಿ ನಾವು ಓದಲೇ ಬೇಕಾದ ಪುಸ್ತಕಗಳು ಬಹಳ ಕಡಿಮೆಯಿವೆ. ಆದರೆ ಅವುಗಳನ್ನು ಮಾತ್ರ ಸರಿಯಾಗಿ ಓದುವುದು ತೀರ ಅಗತ್ಯ. ಉಳಿದ ಪುಸ್ತಕಗಳನ್ನು ಓದದಿದ್ದರೂ ಪರವಾಗಿಲ್ಲ. ಈ ಕೆಲವೇ ಕೆಲವು ಪುಸ್ತಕಗಳೇ ನಿಮಗೆ ಬೇಕಾದುದೆಲ್ಲವನ್ನೂ ಕೊಡಬಲ್ಲಂಥ ಪುಸ್ತಕಗಳು ಎನ್ನುತ್ತಾನೆ. ಟಾಲ್‌ಸ್ಟಾಯ್‌, ದಾಸ್ತವಸ್ತಿ$್ಕ, ಥಾಮಸ್ಮನ್‌, ಪ್ರೌಸ್ಟ್‌, ವಿಕ್ಟರ್‌ ಹ್ಯೂಗೋ, ರಶ್ದೀ ಎಂದೆಲ್ಲ ಪಮುಕ್‌ ಬರೆದಿರುವ ಸುಮಾರು ಹದಿನಾರು ಬರಹಗಳಲ್ಲಿ ಪ್ರಮುಖವಾಗಿ ದಾಸ್ತವಸ್ತಿ$್ಕಯ ಕುರಿತು ಬರೆದಿರುವುದು ಬಹಳ ಮಹತ್ವದ ಬರಹ. ರಿಲ್ಕೆ ಕೂಡಾ ಇದೇ ಮಾತನ್ನು ಹೇಳಿರುವುದು ಕುತೂಹಲಕರ. ತೀರ ಕೆಲವೇ ಪುಸ್ತಕಗಳು, ಕೆಲವು ಅಂದರೆ ಕೆಲವು ಮಾತ್ರವೇ ಅನಿವಾರ್ಯವಾದ ಪುಸ್ತಕಗಳು ಅನ್ನಿಸುತ್ತದೆ. ಎನ್ನುತ್ತಾನೆ ರಿಲ್ಕೆ (‘ಯುವಕವಿಗೆ ಬರೆದ ಪತ್ರಗಳು’).

ಈ ಎಲ್ಲದರ ನಡುವೆ ನಮಗೆ ಒಳ್ಳೊಳ್ಳೆಯ ಸಿನಿಮಾಗಳು ಬೇಕು, ಸಂಗೀತ ಕೇಳಬೇಕು, ಫೇಸ್‌ಬುಕ್ಕು ಬೇಕು. ವ್ಯಾಟ್ಸಪ್ಪು, ಇನ್‌ಸ್ಟಾಗ್ರಾಮು ಬೇಕು. ಯಕ್ಷಗಾನ, ನಾಟಕ, ಜಾತ್ರೆ, ಹಬ್ಬ, ಸಭೆ, ಸೆಮಿನಾರುಗಳು ಬೇಕು. ಮನೆಮಂದಿಯ ಜೊತೆ ಅಲ್ಲಿ ಇಲ್ಲಿ ಟೂರ್‌ ಹೋಗಬೇಕು. ಮಕ್ಕಳ ಪ್ರಬಂಧ, ಪ್ರಾಜೆಕ್ಟು, ಆಟೋಟ, ಎಲ್ಲದರ ಜೊತೆ ನಾವೂ ಏಗುತ್ತಿರಬೇಕು. ಅದು ನಮ್ಮ ಫ್ಯಾಮಿಲಿ ಲೈಫು. ಜೊತೆಗೆ ಭಾನುವಾರದ ಪುರವಣಿಗಳು, ಸಾಹಿತ್ಯಿಕ ಪತ್ರಿಕೆಗಳು, ವರ್ತಮಾನದ ರಾಜಕೀಯ-ಆರ್ಥಿಕ-ಸಾಮಾಜಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ನಿಯತಕಾಲಿಕೆಗಳು, ವಲ್ಡ್‌ರ್‍ ಲಿಟರೇಚರ್‌ ಟುಡೇ, ಗ್ರಾಂಟಾ, ಪ್ಯಾರಿಸ್‌ ರಿವ್ಯೂ, ಪೊಯೆಟ್ರಿ ಇಂಟರ್‌ನ್ಯಾಶನಲ್‌ ತರದ ವಿಶ್ವ ಸಾಹಿತ್ಯಕ್ಕೆ ನಮ್ಮನ್ನು ತೆರೆಯುವ ಪತ್ರಿಕೆಗಳು, ದಿನಪತ್ರಿಕೆ ಎಲ್ಲವೂ ಬೇಕು. ಬೇಕೆಂದರೆ ತಿಂಗಳಿಗೆ ಸುಮಾರು ಐವತ್ತು ಅರವತ್ತು ಸಾಹಿತ್ಯಿಕ ವೆಬ್‌ಸೈಟುಗಳ ನ್ಯೂಸ್‌ಲೆಟರ್‌ ಈ ಮೇಲಿಗೆ ಬಂದು ಬೀಳುತ್ತವೆ, ಅವುಗಳನ್ನೆಲ್ಲ ಗಮನಿಸ (ಓದುವುದಲ್ಲ, ಖಂಡಿತ) ಬೇಕು. ಮತ್ತೆ ಫೋನ್‌ ಮಾಡಿ ಗಂಟೆಗಟ್ಟಲೆ ಕೊರೆಯುವವರು, ಪಾರ್ಟಿಗೆ ಗೋಗರೆದು ಕರೆದು, ಅದೂ ಇದೂ ತಿನ್ನಿಸಿ-ಕುಡಿಸಿ ಆ ಸಂಜೆ-ರಾತ್ರಿಯನ್ನಲ್ಲದೆ ಮರುದಿನವನ್ನೂ ಕೆಡಿಸಿ ಬಿಡುವ ಸ್ನೇಹಿತರೂ ಇರುತ್ತಾರೆ. ಬೇರೆ ಕೆಲಸ ಕಾರ್ಯಗಳೂ, ಭೋಗ ಲಾಲಸೆಗಳೂ ಇರುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಿದ್ದೆ ಮಾಡುವುದಿರುತ್ತದೆ. ಹಲವರಿಗೆ ನಿದ್ದೆ ಬೀಳದ, ಅದನ್ನು ಹೇಗಾದರೂ ಮಾಡಿ ತಮ್ಮ ಹಾಸಿಗೆಗೆ ಕೆಡವಿ ಕೊಳ್ಳಬೇಕಾದ ಸಮಸ್ಯೆಯೂ ಇರುತ್ತದೆ. ವಯಸ್ಸಾದಂತೆ ಸುಸ್ತು, ಬೋರು, ನಿದ್ದೆ, ಕಣ್ಣಿನ ಸಮಸ್ಯೆ ಎಲ್ಲ ಸುರುವಾಗುತ್ತದೆ. ಹಿಂದಿನಂತೆ, ಮೊದಲಿನಷ್ಟುಓದುವುದು ಸಾಧ್ಯವಾಗುವುದಿಲ್ಲ. ಯಾವುದೂ ವಿಸ್ಮಯ, ರೋಮಾಂಚನ, ಕುತೂಹಲ ಹುಟ್ಟಿಸುವುದಿಲ್ಲ.

ಕೊನೆಗೆ ಅನಿಸುತ್ತದೆ, ಸುಮ್ಮನೆ ತಲೆಕೆಡಿಸಿಕೊಳ್ಳುವುದಕ್ಕಿಂತ ಕೈಗೆ ಸಿಕ್ಕಿದ್ದನ್ನು ಓದುತ್ತಿರುವುದೇ ಸರಿಯಾದ ಕ್ರಮ ಎಂದು. ಆದರೆ ಕ್ವಾಲಿಟಿ ರೀಡಿಂಗ್‌ ಅನ್ನುವುದು ಬೇಡವೆ? ನಿಮ್ಮ ಸಂಗ್ರಹದಿಂದ ಕೈಗೆ ಸಿಕ್ಕಿದ್ದನ್ನು ಸೆಳೆದುಕೊಂಡು ಓದಿದರೂ ಅದು ಕ್ವಾಲಿಟಿ ರೀಡಿಂಗ್‌ ಆಗುವಂತೆ ನಿಮ್ಮ ಸಂಗ್ರಹ ಇರಬೇಡವೆ? ಆಗಲೂ, ನಿಮ್ಮ ಕಣ್ಣೆದುರು ಕಡಲಿದೆ. ನಮ್ಮ ಪುಟ್ಟಕೈಗಳಿಂದ ಒಂದು ಬೊಗಸೆಯನ್ನಷ್ಟೇ ಎತ್ತಬಹುದು. ಎತ್ತಿದ್ದೇ ಅದು ಕೈಯಿಂದ ಸೋರ ತೊಡಗುತ್ತದೆ. ಕೈಗೆ ಬಂದಿದ್ದೆಲ್ಲ ಬಾಯಿಯ ತನಕ ಬರುವುದಿಲ್ಲ. ನಾವು ನಮ್ಮ ನಮ್ಮ ದಾಹದ ಧ್ವಜ ಹಿಡಿದು ಓಡುತ್ತಲೇ ಇದ್ದೇವೆ. ಎಂದಿಗೂ ಹಿಂದಿರುಗಲಾರದಷ್ಟುದೂರ ಓಡುತ್ತಿದ್ದೇವೆ. ನಿಂತಲ್ಲೇ ಧ್ವಜವೂರಿ ಕನ್ನಡಿಯಲ್ಲೋ ಕಿಟಕಿಯಲ್ಲೋ ಈ ಕಣ್ಣು ಕಂಡಷ್ಟನ್ನಾದರೂ ಸರಿಯಾಗಿ ಕಾಣಬಹುದಿತ್ತು, ಅದಕ್ಕೂ ಈಗ ತೀರ ತಡವಾದಂತಿದೆ. ಅಸಂಗ್ರಹದ ಹಾದಿ ಹಿಡಿದ ದಾನಿಯ ಹೃದಯದ ತಲ್ಲಣಗಳು ಕಾಡುತ್ತಲೇ ಇರುತ್ತವೆ...

Latest Videos
Follow Us:
Download App:
  • android
  • ios