ಕಾವೇರಿ ಎಸ್‌.ಎಸ್‌.

ಬೆಂಗಳೂರು(ಮಾ.29): ಕೊರೋನಾ ವೈರಸ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಜನರಿಗೆ ಅಗತ್ಯ ಸೇವೆಗಳು ಎಲ್ಲಿ ಲಭ್ಯವಿರಲಿದೆ ಎನ್ನುವುದನ್ನು ತಿಳಿಸಲು ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ‘ಕೊರೋನಾ ಹೆಲ್ಪ… ಇನ್‌’ ಎಂಬ ವೆಬ್‌ಸೈಟ್‌ ಆರಂಭಿಸಿದ್ದಾರೆ.

ಬೆಳಗಾವಿಯ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ವೈಭವ್‌ ಮುಚಂಡಿ ಹಾಗು ವರುಣ್‌ ಶಿರಿ ಈ ಕೊರೋನಾ ಹೆಲ್ಪ… ಇನ್‌ ವೆಬ್‌ಸೈಟ್‌ನ ರೂವಾರಿಗಳು. ಈ ಇಬ್ಬರು ಮೂರು ವಾರಗಳ ಬಂದ್‌ನಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗಾಗಿ ಅನುಭವಿಸುವ ತಾಪತ್ರಯವನ್ನು ಗಮನದಲ್ಲಿ ಇರಿಸಿಕೊಂಡು ಈ ವೆಬ್‌ಸೈಟ್‌ ರೂಪಿಸಿದ್ದಾರೆ.

ಈ ವೆಬ್‌ಸೈಟನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೇವಲ ಎರಡು ದಿನಗಳಲ್ಲಿ ಈ ವೆಬ್‌ಸೈಟ್‌ ಸಿದ್ಧಪಡಿಸಲಾಗಿದೆ.

ಮಾಹಿತಿ ಪಡೆಯುವುದು ಹೇಗೆ?

ಅಂಗಡಿ ಮಾಲಿಕರು ಹಾಗೂ ಇತರೆ ಉದ್ಯಮಿಗಳು ಹಾಗೂ ಚಿಕ್ಕಪುಟ್ಟಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು, ಸೂಪರ್‌ ಮಾರ್ಕೆಟ್‌, ಮಾಲ್‌ಗಳ ಮಾಲಿಕರು ತಮ್ಮ ಮಳಿಗೆಗಳ ಮಾಹಿತಿ, ಲಭ್ಯವಿರುವ ಪದಾರ್ಥಗಳು, ವಸ್ತುಗಳ ಬಗ್ಗೆ ಆನ್‌ಲೈನ್‌ ಮೂಲಕ https://www.corona-help.in  ವೆಬ್‌ಸೈಟ್‌ಗೆ ಸೇರಿಸಬೇಕು. ಗ್ರಾಹಕರು ನಿರ್ದಿಷ್ಟಪ್ರದೇಶದಲ್ಲಿ ತೆರೆದಿರುವ ಅಂಗಡಿಗಳಿಗಾಗಿ ಮನೆಯಲ್ಲೇ ಕುಳಿತು ಹುಡುಕಬಹುದು. ಅಂಗಡಿ ಮಾಲಿಕರು ಹೊಂದಿರುವ ಅಗತ್ಯ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 8105937586 ಸಂಪರ್ಕಿಸಬಹುದು.

ಎರಡು ದಿನಗಳಲ್ಲಿ ಈ ವೆಬ್‌ಸೈಟ್‌ ರೂಪಿಸಲಾಗಿದೆ. ಮೂರು ವಾರಗಳ ಬಂದ್‌ ವೇಳೆ ಜನರು ಹೊರಬರಲು ನಿರ್ಬಂಧವಿದೆ. ಇಂತಹ ಸಮಯದಲ್ಲಿ ಅಗತ್ಯ ಸಾಮಗ್ರಿಗಳಿಗಾಗಿ ಯಾವ ಮಳಿಗೆಗಳು ತೆರೆದಿವೆ ಎಂಬುದನ್ನು ಅರಿಯುವುದು ಕಷ್ಟಕರ. ಈ ವೆಬ್‌ಸೈಟ್‌ನಲ್ಲಿ ಅಂಗಡಿ ಮಾಲಿಕರು ನೋಂದಣಿ ಮಾಡಿಕೊಂಡರೆ ಜನರಿಗೆ ಸಹಕಾರಿ. ಗ್ರಾಹಕರು ಸಹ ಲೊಕೇಷನ್‌ ಹಾಕಿ ಅಂಗಡಿ, ಮಳಿಗೆಗಳ ಬಗ್ಗೆ ಅರಿಯಬಹುದು.

- ವರುಣ್‌ ಶಿರಿ