ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅದನ್ನು ದುರ್ಬಳಕೆ ಮಾಡುವವರು ಹೆಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುಳ್ಳು ಸುದ್ದಿಗಳೆಂಬುವುದು ನಾಗರಿಕ ಸಮಾಜ ಮತ್ತು ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ತಲೆನೋವಿನ ವಿಷಯವಾಗಿದೆ.

ಸುಳ್ಳುಸುದ್ದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸೋಶಿಯಲ್ ಮೀಡಿಯಾ ದಿಗ್ಗಜ ಕಂಪನಿಗಳು ಕಾರ್ಯನಿರತರಾಗಿದ್ದು, ತಾಂತ್ರಿಕ ಹಾಗೂ ಕಾನೂನಾತ್ಮಕ ಪರಿಹಾರಗಳನ್ನು ಹುಡುಕುತ್ತಿದ್ದಾರೆ.

ಇದೀಗ ಆ ನಿಟ್ಟಿನಲ್ಲಿ, ಗೂಗಲ್ ಜೊತೆ ಕೈ ಜೋಡಿಸಿರುವ ವಾಟ್ಸಪ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಆ ಮೂಲಕ ಸುಳ್ಳು ಸುದ್ದಿಗಳೆಂಬ ಚಾಳಿಯನ್ನು ನಿಯಂತ್ರಿಸಲು ಮುಂದಾಗಿದೆ.

ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಹಬ್ಬ! Realme ಹೊಸ ಫೋನ್ ಸಖತ್ ಅಷ್ಟೇಯಲ್ಲ ಬಲು ಅಗ್ಗ

ಬಳಕೆದಾರರು ತಮಗೆ ಬಂದಿರುವ ಇಮೇಜ್ ಗಳ ಸತ್ಯಾಸತ್ಯತೆಯನ್ನು ತಿಳಿಯುವಂತಾಗಲು ಗೂಗಲ್‌ನ ಇಮೇಜ್ ಸರ್ಚ್ ಸೌಲಭ್ಯ ಬಳಸಲು ವಾಟ್ಸಪ್ ಪ್ರಯೋಗ ನಡೆಸಿದೆ ಎಂದು WABetaInfo ಹೇಳಿದೆ. ಆದರೆ ಈ ಫೀಚರ್ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಬಳಕೆದಾರರು, ಫೋಟೋ ಬಂದಿರುವ  ಚಾಟ್ ವಿಂಡೋನಲ್ಲೇ ಕಾಣಿಸುವ ‘ಸರ್ಚ್ ಬೈ ಇಮೇಜ್’ ಆಯ್ಕೆ ಮಾಡಿಕೊಳ್ಳಬೇಕು. ಆಗ , ಆ ಇಮೇಜನ್ನು ಗೂಗಲ್‌ಗೆ ಅಪ್ಲೋಡ್ ಮಾಡುವುದಾಗಿ ವಾಟ್ಸಪ್ ನಿಮ್ಮ ಗಮನಕ್ಕೆ ತರುತ್ತದೆ. ಬಳಿಕ ಬ್ರೌಸರ್‌ನಲ್ಲಿ ಅದಕ್ಕೆ ಸಂಬಂಧಿಸಿದಂತೆ ಫಲಿತಾಂಶಗಳನ್ನು ತೋರಿಸುತ್ತದೆ.

ಇದನ್ನೂ ಓದಿ: ಇದು ಅಂತಿಂಥ ಇಯರ್‌ಬಡ್‌ ಅಲ್ಲ, ಕಿವಿಗೆ ಹಾಕ್ಕೊಂಡ್ರೆ ‘ಕಥೆ’ ಅಷ್ಟೇ!

ಆ ಮೂಲಕ ಬಳಕೆದಾರರು ತಮಗೆ ಬಂದಿರುವ ಫೋಟೋವಿನ ವಾಸ್ತವಿಕತೆಯನ್ನು ತಿಳಿದುಕೊಳ್ಳಬಹುದಾಗಿದೆ. ಆ ಫೋಟೋನ ವಿವರಗಳನ್ನು ಗಮನಿಸಿದಾಗ ಆ ಫೋಟೋ ಯಾರ್ಯಾರು ಬಳಸಿದ್ದಾರೆ? ಯಾವಾಗ ಬಳಸಿದ್ದಾರೆ? ಯಾವ್ಯಾವ ವಿವರಣೆ ನೀಡಿದ್ದಾರೆ? ಎಂಬಿತ್ಯಾದಿ ಮಾಹಿತಿಗಳನ್ನು ಗಮನಿಸಿದೆರೆ ಬಳಕೆದಾರರಿಗೆ ವಾಸ್ತವಾಂಶ ತಿಳಿದು ಬರುವುದು.