ಜಾಗತಿಕವಾಗಿ ಸೇವೆಗಳಲ್ಲಿ ವತ್ಯಾಸವಾಗಿದ್ದ ವಾಟ್ಸ್‌ಆಪ್‌ ಸರ್ವೀಸ್‌ ಮತ್ತೆ ಆರಂಭವಾಗಿದೆ. ಹಂತ ಹಂತವಾಗಿ ಸೇವೆಯನ್ನು ಮರಳಿ ನೀಡಲಾಗಿದೆ. ಅಂದಾಜು ಒಂದೂವರೆ ಗಂಟೆಗಳ ಕಾಲ ದೇಶದಲ್ಲಿ ವಾಟ್ಸ್‌ಆಪ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. 

ಬೆಂಗಳೂರು/ನವದೆಹಲಿ (ಅ.25): ವಿಶ್ವದ ಹಲವು ದೇಶಗಳಲ್ಲಿ ಮಂಗಳವಾರ ಸುಮಾರು ಒಂದೂವರೆ ಗಂಟೆಗಳ ಕಾಲ ವಾಟ್ಸ್‌ಆಪ್‌ ಸೇವೆಗಳು ಸ್ಥಗಿತಗೊಂಡಿದ್ದವು. ಮಾಹಿತಿಗಳ ಪ್ರಕಾರ ಮಧ್ಯಾಹ್ನ 12.30ಕ್ಕೆ ವಾಟ್ಸ್ಆಪ್ ಕೆಲಸ ಮಾಡುವುದನ್ನು ನಿಲ್ಲಿಸಲು ಆರಂಭಿಸಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲದ ವ್ಯತ್ಯಯದ ನಂತರ ಮಧ್ಯಾಹ್ನ 2.06 ನಿಮಿಷಕ್ಕೆ ಮತ್ತೆ ಕೆಲಸ ಆರಂಭಿಸಿತು. ಈ ದೋಷಕ್ಕೆ ಸಂಬಂಧಿಸಿದಂತೆ ವಾಟ್ಸ್‌ಆಪ್‌ನ ಮಾತೃಸಂಸ್ಥೆ ಮೆಟಾದಿಂದ ಸರ್ಕಾರ ವರದಿ ಕೇಳಿದೆ. ಭಾರತದಲ್ಲಿ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಳಕೆದಾರರು ಮೆಟಾ ಒಡೆತನದ ಮೆಸೆಂಜರ್ ಸೇವೆಯಲ್ಲಿ ಅಡಚಣೆಯ ಬಗ್ಗೆ ದೂರು ನೀಡಿದ್ದರು. ವೆಬ್‌ಸೈಟ್ ಟ್ರ್ಯಾಕರ್ ಡೌನ್ ಡಿಟೆಕ್ಟರ್ ಮೆಸೆಂಜರ್ ಸೇವೆಯಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಮಾಹಿತಿ ನೀಡಿತ್ತು. ವಾಟ್ಸ್‌ಆಪ್‌ ಕೆಲಸ ಮಾಡುತ್ತಿಲ್ಲ ಎಂಬ ಸುದ್ದಿ ಟ್ವಿಟರ್‌ನಲ್ಲೂ ಟ್ರೆಂಡಿಂಗ್ ಆಗಿತ್ತು. ವಾಟ್ಸ್‌ಆಪ್‌ ವಿಶ್ವಾದ್ಯಂತ 2 ಶತಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಮಧ್ಯಾಹ್ನ 12.30ರ ಸುಮಾರಿಗೆ ವಾಟ್ಸ್‌ಆಪ್‌ ಸೇವೆಯಲ್ಲಿ ವ್ಯತ್ಯಯ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದ ಬೆನ್ನಲ್ಲಿಯೇ ಸಾಧ್ಯವಾದಷ್ಟು ಬೇಗ ಇದನ್ನು ಸರಿಪಡಿಸುವುದಾಗಿ ಮೆಟಾ ಮಾಹಿತಿ ನೀಡಿತ್ತು. ಸೇವೆಯನ್ನು ಸ್ಥಗಿತಗೊಳಿಸಿದ ಒಂದು ಗಂಟೆಯ ನಂತರ, ವಾಟ್ಸ್‌ಆಪ್‌ನ ಮಾತೃ ಕಂಪನಿ ಮೆಟಾದ ವಕ್ತಾರರು ಮಾತನಾಡಿದ್ದು, 'ಕೆಲವು ಜನರು ಸಂದೇಶಗಳನ್ನು ಕಳುಹಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ನಾವು ವಾಟ್ಸ್‌ಆಪ್‌ ಸೇವೆಯನ್ನು ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ' ಎಂದಿದ್ದರು. ಆದರೆ, ಕಂಪನಿಯು ಸಮಸ್ಯೆಗೆ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ.

ರಿತೇಶ್ ಎಂಬ ಬಳಕೆದಾರ, ಸಂದೇಶಗಳನ್ನು ಸಿಂಕ್ ಮಾಡುವಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿದ್ದರು. ಡೌನ್ ಡಿಟೆಕ್ಟರ್‌ನಲ್ಲಿ ಸಮಸ್ಯೆಯನ್ನು ವರದಿ ಮಾಡುವಾಗ ಅವರು ಈ ವಿಚಾರ ಬರೆದಿದ್ದಾರೆ. ಲ್ಯಾಪ್‌ಟಾಪ್‌ನೊಂದಿಗೆ ಸಿಂಕ್ ಮಾಡಲು ವಾಟ್ಸ್‌ಆಪ್‌ನ ಕ್ಯುಆರ್‌ ಕೋಡ್ ಸಂಪರ್ಕಗೊಳ್ಳುತ್ತಿಲ್ಲ. ಸಂದೇಶವನ್ನು ಕಳುಹಿಸಲಾಗುತ್ತಿಲ್ಲ. ಈ ಹಿಂದೆ ದೆಹಲಿ, ಲಕ್ನೋ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವು ನಗರಗಳ ಬಳಕೆದಾರರು ಮೆಸೇಜಿಂಗ್ ಸೇವೆ ಕಾರ್ಯನಿರ್ವಹಿಸದಿರುವ ಬಗ್ಗೆ ದೂರು ನೀಡಿದ್ದರು.

WhatsApp Down: ವಾಟ್ಸ್‌ಆಪ್‌ ಡೌನ್‌ ಆದ್ರೆ, ಬೇರೆ ಯಾವ ಆಪ್‌ ಬಳಸಿದರೆ ಒಳ್ಳೇದು?

ವಾಟ್ಸ್‌ಆಪ್‌ ನಲ್ಲಿ ಸಂದೇಶಗಳನ್ನು ಹೇಗೆ ಕಳುಹಿಸಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ?: ವಾಟ್ಸ್‌ಆಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ. ಅಂದರೆ ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಸಂದೇಶವನ್ನು ಓದಬಹುದು. ನೀವು ಸಂದೇಶವನ್ನು ಕಳುಹಿಸಿದಾಗ, ಅದನ್ನು ನಿರ್ದಿಷ್ಟ ಎನ್‌ಕ್ರಿಪ್ಶನ್ ಪ್ರೋಟೋಕಾಲ್‌ನೊಂದಿಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ವಾಟ್ಸ್‌ಆಪ್‌ ಈಗ ಈ ಎನ್‌ಕ್ರಿಪ್ಟ್ ಮಾಡಿದ ಸಂದೇಶವನ್ನು ರಿಸೀವರ್‌ಗೆ ತಲುಪಿಸುವವರೆಗೆ ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸುತ್ತದೆ. ವಿತರಣೆಯ ನಂತರ, ರಿಸೀವರ್‌ನ ಸಾಧನವು ವಿಶಿಷ್ಟ ಕ್ರಿಪ್ಟೋಗ್ರಾಫಿಕ್ ಕೀಯನ್ನು ಬಳಸಿಕೊಂಡು ಸಂದೇಶವನ್ನು ಡೀಕ್ರಿಪ್ಟ್ ಮಾಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ, ವಾಟ್ಸ್‌ಆಪ್‌ ನಿಮ್ಮ ಸಂದೇಶದ ವಿಷಯದ ಬಗ್ಗೆ ತಿಳಿದಿರುವುದಿಲ್ಲ. ವಾಟ್ಸ್‌ಆಪ್‌ ನ ಎನ್‌ಕ್ರಿಪ್ಶನ್ ತಂತ್ರಜ್ಞಾನವನ್ನು ಸಿಗ್ನಲ್ ಎನ್‌ಕ್ರಿಪ್ಶನ್ ಪ್ರೋಟೋಕಾಲ್ ಎಂದು ಕರೆಯಲಾಗುತ್ತದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಮಗೆ ಮೇಲ್ನೋಟಕ್ಕೆ ಸುರಕ್ಷಿತ ಭಾವನೆಯನ್ನು ನೀಡಬಹುದಾದರೂ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಒಬ್ಬರು ನಿರೀಕ್ಷಿಸುವಷ್ಟು ಸುರಕ್ಷಿತವಾಗಿಲ್ಲ.

WhatsApp Down: ಟ್ವಿಟ್ಟರ್‌ಗೆ ಓಡೋಡಿ ಬಂದ ಜನ, ಮೀಮ್ಸ್‌ಗಳ ಹಬ್ಬ!

ಕಳೆದ ವರ್ಷ ಅಕ್ಟೋಬರ್ 4 ರಂದು 6 ಗಂಟೆಗಳ ಕಾಲ ಸೇವೆ ವ್ಯತ್ಯಯವಾಗಿತ್ತು: 2021ರ ಅಕ್ಟೋಬರ್ 4 ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆಪ್‌ ಪ್ಲಾಟ್‌ಫಾರ್ಮ್‌ಗಳನ್ನು ಸುಮಾರು 6 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಶತಕೋಟಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಸ್ಥಗಿತದ ಪರಿಣಾಮವು ಯುಎಸ್ ಮಾರುಕಟ್ಟೆಯಲ್ಲಿ ಫೇಸ್‌ಬುಕ್‌ನ ಷೇರುಗಳ ಮೇಲೂ ಗೋಚರಿಸಿತು ಮತ್ತು ಕಂಪನಿಯ ಷೇರುಗಳು 6% ರಷ್ಟು ಕುಸಿದವು. ಫೇಸ್‌ಬುಕ್ ವಿಶ್ವಾದ್ಯಂತ 2.85 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದರೆ ವಾಟ್ಸ್‌ಆಪ್‌ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಇನ್‌ಸ್ಟಾಗ್ರಾಮ್ 1.38 ಶತಕೋಟಿ ಬಳಕೆದಾರರನ್ನು ಹೊಂದಿದೆ.