ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಜವಾಹರಲಾಲ್ ನೆಹರೂ ತಾರಾಲಯಕ್ಕೆ ಭೇಟಿ ನೀಡುವಂತೆ ಡಾ. ಪ್ರಮೋದ್ ಗಲಗಲಿ ಕರೆ

ಬೆಂಗಳೂರು(ಡಿ.18): ಇದೇ ಡಿ.26(ಗುರುವಾರ) ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳಪ್ರಿಯರ ಹುಮ್ಮಸ್ಸಿಗೆ ಎಣೆ ಇಲ್ಲದಂತಾಗಿದೆ. ಈ ಅಪರೂಪದ ಖಗೋಳೀಯ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ನಗರದ ಜವಾಹರಲಾಲ್ ನೆಹರೂ ತಾರಲಯ ಸರ್ವ ಸನ್ನದ್ಧವಾಗಿದೆ.

ಈ ಹಿನ್ನೆಲೆಯಲ್ಲಿ ಕಂಕಣ ಸೂರ್ಯಗ್ರಹಣ ಮತ್ತು ಅದರ ವೀಕ್ಷಣೆಯ ಸಿದ್ಧತೆ ಕುರಿತು ಜವಾಹರಲಾಲ್ ನೆಹರೂ ತಾರಾಲಯದ ಮುಖ್ಯಸ್ಥ ಡಾ. ಪ್ರಮೋದ್ ಗಲಗಲಿ ನಿಮ್ಮ ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದ್ದು, ಕಂಕಣ ಸೂರ್ಯಗ್ರಹಣದ ವೀಕ್ಷಣೆಗೆ ತಾರಾಲಯಕ್ಕೆ ನರುವಂತೆ ಜನತೆಗೆ ಕರೆ ನೀಡಿದ್ದಾರೆ.

ಲಾರ್ಡ್ ಆಫ್ ದ ರಿಂಗ್ಸ್: ಶತಮಾನದ ಸೂರ್ಯಗ್ರಹಣಕ್ಕೆ ದಿನಗಣನೆ!

ಡಾ. ಪ್ರಮೋದ್ ಗಲಗಲಿ ಅವರ ಜೊತೆಗಿನ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

"

ಪ್ರಶ್ನೆ: ಕಂಕಣ ಸೂರ್ಯಗ್ರಹಣ ವಿಶೇಷತೆ ಏನು?

ಉತ್ತರ: ಎಲ್ಲ ಗ್ರಹಣಗಳೂ ವಿಶೇಷ. ಅದರಲ್ಲೂ ಕಂಕಣ ಸೂರ್ಯಗ್ರಹಣ ಖಗೋಳ  ಪ್ರಿಯರ ಅತ್ಯಂತ ಪ್ರೀತಿಪಾತ್ರ ಖಗೋಳೀಯ ವಿದ್ಯಮಾನ. ಸಾಮಾನ್ಯ ಸೂರ್ಯ ಗ್ರಹಣದ ವೇಳೆ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಇದಕ್ಕೆ ಭೂಮಿಯಿಂದ ಸೂರ್ಯ ಮತ್ತು ಚಂದ್ರ ಗಾತ್ರದಲ್ಲಿ ಒಂದೇ ಆಕಾರದಲ್ಲಿ ಗೋಚರವಾಗುವುದು ಕಾರಣ.

ಆದರೆ ಇದೇ ಜನವರಿ 5 ರಂದು ಭೂಮಿ ಮತ್ತು ಸೂರ್ಯನ ಅಂತರ ಕಡಿಮೆಯಾಗುವುದರಿಂದ ಸೂರ್ಯ ಗಾತ್ರದಲ್ಲಿ ಕೊಂಚ ದೊಡ್ಡದಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಕಂಕಣ ಸೂರ್ಯಗ್ರಹಣದ ವೇಳೆ ಚಂದಿರ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಸೂರ್ಯನ ಸುತ್ತ ಬಳೆಯಾಕಾರದ ವೃತ್ತವೊಂದು ನಿರ್ಮಾಣಗೊಂಡಂತೆ ಗೋಚರವಾಗುತ್ತದೆ. ಈ ಕಾರಣಕ್ಕೆ ಕಂಕಣ ಸೂರ್ಯಗ್ರಹಣವನ್ನು ಅಪರೂಪದ ಖಗೋಳೀಯ ವಿದ್ಯಮಾನ ಎನ್ನಬಹುದು.

ಪ್ರಶ್ನೆ: ಕಂಕಣ ಸೂರ್ಯಗ್ರಹಣಕ್ಕೆ ತಾರಾಲಯ ಸಿದ್ಧತೆಗಳೇನು?

ಉತ್ತರ: ಎಲ್ಲ ಖಗೋಳಿಯ ವಿದ್ಯಮಾನಗಳ ವೀಕ್ಷಣೆಗೆ ನೆಹರೂ ತಾರಾಲಯ ಸರ್ವ ಸನ್ನದ್ಧವಾಗಿರುತ್ತದೆ. ಅದರಂತೆ ಕಂಕಣ ಸೂರ್ಯಗ್ರಹಣ ವೀಕ್ಷಣೆಗೂ ತಾರಾಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ . ಪ್ರಮುಖವಾಗಿ ವೆಲ್ಡರ್ಸ್ ಗ್ಲಾಸ್ ಎಂದು ಕರೆಯಲ್ಪಡುವ ವಿಶೇಷ ಉಪಕರಣ, ರ್ಯಾಟನ್ ನಂ 14 ಎಂದು ಕರೆಯಲ್ಪಡುವ ವಿಶೇಷ ಉಪಕರಣ ಹಾಗೂ ಟೆಲಿಸ್ಕೋಪ್ ಮೂಲಕ ಸೂರ್ಯನ ಬಿಂಬವನ್ನು ಪರದೇ ಮೇಲೆ ಮೂಡಿಸಿ ಸೂರ್ಯಗ್ರಹಣದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.

ಪ್ರಶ್ನೆ: ತಾರಾಲಯದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ?

ಉತ್ತರ: ವಿಜ್ಞಾನ ಸಾರ್ವತ್ರಿಕ ಹಾಗೂ ಕುತೂಹಲಕಾರಿ ಕ್ಷೇತ್ರ. ಇದಕ್ಕೆ ಜನರ ಪ್ರತಿಕ್ರಿಯೆ ಯಾವಾಗಲೂ ಸಕಾರಾತ್ಮಕವಾಗಿಯೇ ಇರುತ್ತದೆ. ಖಗೋಳೀಯ ವಿದ್ಯಮಾನಗಳು ಸಂಭವಿಸಿದಾಗ ಜನತೆಗೆ ಸಾಕ್ಷಿಯಾಗಲು ತಾರಾಲಯ ಕರೆ ನೀಡುತ್ತದೆ. ಪ್ರಮುಖವಾಗಿ ನಗರದ ಶಿಕ್ಷಿತ ಸಮುದಾಯ ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞರು ತಾರಾಲಯದೊಂದಿಗೆ ಕೈಜೋಡಿಸುತ್ತಾರೆ.

ಅಲ್ಲದೇ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳ ವಿಜ್ಞಾನ ವಿಭಾಗ ಕೂಡ ಈ ವೇಳೆ ತಾರಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತವೆ. ಖಗೋಳೀಯ ವಿದ್ಯಮಾನದ ವೇಳೆ ಸಾಮಾನ್ಯ ಜನತೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ದಂಡೇ ತಾರಾಲಯಕ್ಕೆ ಆಗಮಿಸಿ ಈ ವಿದ್ಯಾಮಾನಗಳನ್ನು ಕಣ್ತುಂಬಿಕೊಳ್ಳುತ್ತದೆ. ಅದರಂತೆ ಈ ಬಾರಿಯ ಕಂಕಣ ಸೂರ್ಯಗ್ರಹಣದ ವಿದ್ಯಮಾನವನ್ನು ಎಲ್ಲರೂ ಆಸ್ವಾದಿಸಲಿದ್ದಾರೆ ಎಂಬ ಭರವಸೆ ನನ್ನದು.

ಪ್ರಶ್ನೆ: ಗ್ರಹಣದ ಕುರಿತಾದ ಸಮಾಜದ ಮೂಢನಂಬಿಕೆ ಹೋಗಲಾಡಿಸುವಲ್ಲಿ ತಾರಾಲಯದ ಪಾತ್ರ

ಉತ್ತರ: ನೆಹರೂ ತಾರಾಲಯ ವಿಜ್ಞಾನದ ದೀವೀಗೆಯನ್ನು ಸದಾ ಹೊತ್ತು ನಡೆದಿರುವ ಸಂಸ್ಥೆ. ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ವಿಜ್ಞಾನದೆಡೆ ಜನರನ್ನು ಆಕರ್ಷಿಸುವಲ್ಲಿ ತಾರಾಲಯ ಮುಂಚೂಣಿಯಲ್ಲಿದೆ. ಅದರಂತೆ ಗ್ರಹಣದ ಸಂದರ್ಭದಲ್ಲಿ ನಾವು ಜನರನ್ನು ಗ್ರಹಣ ವೀಕ್ಷಣೆಗೆ ಆಹ್ವಾನಿಸುವುದಲ್ಲದೇ ಗ್ರಹಣದ ಕುರಿತಾದ ವೈಜ್ಞಾನಿಕ ತಿಳುವಳಿಕೆಯನ್ನು ಜನಜಾಗೃತಿ ಮೂಲಕ ಪ್ರಚುರಪಡಿಸುವಲ್ಲಿ ನಾವು ನಿರತರಾಗಿದ್ದೇವೆ.

ಪ್ರಶ್ನೆ: ಕಂಕಣ ಸೂರ್ಯಗ್ರಹಣ ವಿದ್ಯಮಾನದ ವೇಳೆ ಜನತೆಗೆ ನಿಮ್ಮ ಕರೆ

ಉತ್ತರ: ಇದೊಂದು ಅಪರೂಪದ ಖಗೋಳೀಯ ವಿದ್ಯಮಾನ. ಈ ವಿದ್ಯಮಾನಕ್ಕೆ ಸಾಕ್ಷಿಯಾಗುವಂತೆ ನಾನು ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತೇನೆ. ಎಲ್ಲ ಮೂಢನಂಬಿಕೆಗಳನ್ನು ಬದಿಗೊತ್ತಿ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಿ ಎಂಬುದೇ ನನ್ನ ಮನವಿ.

 

                                                                          ಧನ್ಯವಾದಗಳು...