ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿ: ಒಳ ಹೊಕ್ಕರೆ ಹೊರ ಬರಲಾಗದು ಗ್ಯಾರಂಟೀ!
ನೋಡಬನ್ನಿ ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿ| ಅಬೆಲ್ 2029 ಗ್ಯಾಲಕ್ಸಿ ಕ್ಲಸ್ಟರ್’ನಲ್ಲಿರುವ IC 1101 ಗ್ಯಾಲಕ್ಸಿ| ಒಟ್ಟು 2 ಮಿಲಿಯನ್ ಜ್ಯೋತಿವರ್ಷ ವ್ಯಾಸ ಹೊಂದಿರುವ IC 1101| ಸುಮಾರು 100 ಟ್ರಿಲಿಯನ್ ನಕ್ಷತ್ರಗಳನ್ನು ಹೊಂದಿರುವ IC 1101 ಗ್ಯಾಲಕ್ಸಿ| 11 ಬಿಲಿಯನ್ ವರ್ಷಗಳ ಹಿಂದೆ ರಚಿತವಾದ IC 1101 ಗ್ಯಾಲಕ್ಸಿ| ಭೂಮಿಯಿಂದ ಸುಮಾರು 1.04 ಬಿಲಿಯನ್ ಜ್ಯೋತಿವರ್ಷ ದೂರ| C 1101 ಗ್ಯಾಲಕ್ಸಿಯಲ್ಲಿ ಬರೋಬ್ಬರಿ 200 ಮಿಲ್ಕಿ ವೇ ಗ್ಯಾಲಕ್ಸಿಗಳನ್ನು ಸೇರಿಸಬಹುದು|
ವಾಷಿಂಗ್ಟನ್(ನ.25): ಬ್ರಹ್ಮಾಂಡ ನಿಜಕ್ಕೂ ನಾವು ಊಹಿಸಿದ್ದಕ್ಕಿಂತಲೂ ಅಗಾಧವಾದುದು. ಬ್ರಹ್ಮಾಂಡದ ಮುಂದೆ ಭೂಮಿಯಷ್ಟೇ ಅಲ್ಲ, ಜೀವನದ ಮೂಲಾಧಾರವಾಗಿರುವ ಸೂರ್ಯ ಕೂಡ ಕುಬ್ಜ. ಸೂರ್ಯನಿಗಿಂತ ಲಕ್ಷಾಂತರ ಪಟ್ಟು ದೊಡ್ಡದಾದ ನಕ್ಷತ್ರಗಳು ಈ ವಿಶ್ವದ ಮೂಲೆಯಲ್ಲಿ ಬೆಳಗುತ್ತಿವೆ.
ಅದರಂತೆ ಬ್ರಹ್ಮಾಂಡದ ಎಲ್ಲಾ ನಕ್ಷತ್ರಗಳಿಗೂ ಗ್ಯಾಲಕ್ಸಿ(ನಕ್ಷತ್ರಪುಂಜ)ಗಳೇ ಜನ್ಮಸ್ಥಾನ. ಆಗಷ್ಟೇ ಹುಟ್ಟಿ ಕಣ್ಣು ಬಿಡುವ ಪುಟಾಣಿ ನಕ್ಷತ್ರವನ್ನು ಮಿಲಿಯನ್ ವರ್ಷಗಟ್ಟಲೇ ಸಾಕಿ ಸಲುಹುವ ಗ್ಯಾಲಕ್ಸಿ ನಕ್ಷತ್ರಗಳ ತಾಯಿ ಎಂದರೆ ತಪ್ಪಾಗಲಾರದು.
ಬಿಲಿಯನ್ ಅಥವಾ ಟ್ರಿಲಿಯನ್ ಸಂಖ್ಯೆಯಲ್ಲಿರುವ ನಕ್ಷತ್ರಗಳನ್ನು ಅಷ್ಟೇ ಸಂಖ್ಯೆಯಲ್ಲಿರುವ ಗ್ಯಾಲಕ್ಸಿಗಳು ತನ್ನ ಒಡಲಲ್ಲಿಟ್ಟುಕೊಂಡಿವೆ. ಈ ಗ್ಯಾಲಕ್ಸಿಗಳ ಸಮೂಹವನ್ನೇ ವಿಶ್ವ(Universe) ಎಂದು ಕರೆಯಾಗುತ್ತದೆ.
ವಿಶ್ವದ ಅತ್ಯಂತ ದೊಡ್ಡ ನಕ್ಷತ್ರ: ಸೂರ್ಯ ಸುಳಿಯದು ಯುವೈ ಸ್ಕೂಟಿ ಹತ್ರ!
ವಿಶ್ವದ ಅಧ್ಯಯನದಲ್ಲಿ ನಿರತವಾಗಿರುವ ಖಗೋಳಶಾಸ್ತ್ರಜ್ಞರು, ನಮಗೆ ಗೊತ್ತಿರುವ ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅಬೆಲ್ 2029 ಗ್ಯಾಲಕ್ಸಿ ಕ್ಲಸ್ಟರ್’ನಲ್ಲಿರುವ IC 1101 ಗ್ಯಾಲಕ್ಸಿ ಇದುವರೆಗೂ ನಾವು ಕಂಡು ಹಿಡಿದ ಅತ್ಯಂತ ದೊಡ್ಡ ನಕ್ಷತ್ರಪುಂಜ ಎಂದು ಹೇಳಲಾಗಿದೆ.ವರ್ಗೋ ತಾರಾಪುಂಜದಲ್ಲಿರುವ IC 1101 ಗ್ಯಾಲಕ್ಸಿ ಒಟ್ಟು 2 ಮಿಲಿಯನ್ ಜ್ಯೋತಿವರ್ಷದಷ್ಟು ಅಗಾಧ ವ್ಯಾಸವನ್ನು ಹೊಂದಿದೆ. ಈ ನಕ್ಷತ್ರಪುಂಜದಲ್ಲಿ ಸುಮಾರು 100 ಟ್ರಿಲಿಯನ್ ನಕ್ಷತ್ರಗಳಿವೆ ಎಂದು ಅಂದಾಜಿಸಲಾಗಿದೆ.
ನಮ್ಮ ಕ್ಷಿರಪಥ(Milky Way) ಗ್ಯಾಲಕ್ಸಿ ಕೇವಲ 2 ಲಕ್ಷ ಜ್ಯೋತಿವರ್ಷ ವ್ಯಾಸ ಹೊಂದಿದೆ. ಅಲ್ಲದೇ ಮಿಲ್ಕಿ ವೇ ಗ್ಯಾಲಕ್ಸಿ ಕೇವಲ 100-400 ಬಿಲಿಯನ್ ನಕ್ಷತ್ರಗಳನ್ನು ಒಳಗೊಂಡಿದೆ.
ಅಂದರೆ IC 1101 ಗ್ಯಾಲಕ್ಸಿಯಲ್ಲಿ ಬರೋಬ್ಬರಿ 200 ಮಿಲ್ಕಿ ವೇ ಗ್ಯಾಲಕ್ಸಿಗಳನ್ನು ಸೇರಿಸಬಹುದು. IC 1101 ಗ್ಯಾಲಕ್ಸಿ ಭೂಮಿಯಿಂದ ಸುಮಾರು 1.04 ಬಿಲಿಯನ್ ಜ್ಯೋತಿವರ್ಷ ದೂರದಲ್ಲಿದೆ.
ಹಬಲ್ ಕಣ್ಣಿಗೆ ಬಿದ್ದ ತೀವ್ರ ವಿಕಿರಣ ಹೊರಸೂಸುತ್ತಿರುವ ಗ್ಯಾಲಕ್ಸಿ!
ಗ್ಯಾಲಕ್ಸಿ ಪತ್ತೆ:
11 ಬಿಲಿಯನ್ ವರ್ಷಗಳ ಹಿಂದೆ ನಿರ್ಮಾಣಗೊಂಡ IC 1101 ಗ್ಯಾಲಕ್ಸಿಯನ್ನು 1790ರಲ್ಲಿ ಖಗೋಳಶಾಸ್ತ್ರಜ್ಞ ಫೆಡ್ರಿಕ್ ವಿಲಿಯಂ ಹರ್ಷಲ್ ಮೊದಲ ಬಾರಿಗೆ ಗುರುತಿಸಿದರು.
ಆದರೆ ಆರಂಭಿಕ ಹಂತದಲ್ಲಿ IC 1101 ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿರುವ ನೆಬ್ಯುಲಾ ಎಂದು ಹೇಳಲಾಗಿತ್ತು. ಆದರೆ 1925ರ ಬಳಿಕ ಎಡ್ವಿನ್ ಹಬಲ್ ಮತ್ತು ಇತರ ಖಗೋಳಶಾಸ್ತ್ರಜ್ಞರ ನಿರಂತರ ಅಧ್ಯಯನದ ಬಳಿಕ ಇದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ಗ್ಯಾಲಕ್ಸಿ ಎಂಬುದು ಸಾಬೀತಾಯಿತು.
ಇಷ್ಟು ಅಗಾಧವಾದ ಗ್ಯಾಲಕ್ಸಿಯ ಮಧ್ಯಭಾಗದಲ್ಲಿ ನಮ್ಮ ಸೂರ್ಯನಿಗಿಂತ ಸುಮಾರು 40 ರಿಂದ 100 ಬಿಲಿಯನ್’ಗೂ ಅಧಿಕ ವ್ಯಾಸ ಹೊಂದಿರುವ ಕಪ್ಪುರಂಧ್ರ ಸುತ್ತುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.