3 ವರ್ಷದಲ್ಲಿ ರಾಜ್ಯದ 20 ಲಕ್ಷ ಯುವಕರಿಗೆ ಟೆಕ್ ತರಬೇತಿ: ರಾಜೀವ್ ಚಂದ್ರಶೇಖರ್
ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 18 ರಿಂದ 20 ಲಕ್ಷ ಯುವಕರಿಗೆ ತಂತ್ರಜ್ಞಾನ ಕೌಶಲ್ಯ ಒದಗಿಸುವ ತಾಂತ್ರಿಕ ಕೌಶಲ್ಯಾಭಿವೃದ್ಧಿ ಯೋಜನೆ ಶೀಘ್ರವೇ ಜಾರಿಯಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಬೆಂಗಳೂರು (ಮಾ.09): ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 18 ರಿಂದ 20 ಲಕ್ಷ ಯುವಕರಿಗೆ ತಂತ್ರಜ್ಞಾನ ಕೌಶಲ್ಯ ಒದಗಿಸುವ ತಾಂತ್ರಿಕ ಕೌಶಲ್ಯಾಭಿವೃದ್ಧಿ ಯೋಜನೆ ಶೀಘ್ರವೇ ಜಾರಿಯಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನ್ಯಾಸ್ಕಾಂ ಆಯೋಜಿಸಿದ್ದ ‘ಡೀಪ್‌ಟೆಕ್ ಶೃಂಗಸಭೆ’ಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೋವಿಡ್ ಬಳಿಕ ಡಿಜಿಟಲ್, ಟೆಕ್ನಾಲಜಿ ಕೌಶಲ್ಯವುಳ್ಳ ಉದ್ಯೋಗಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಅದೇ ಕಾರಣಕ್ಕೆ ಕಳೆದ ಬಜೆಟ್‌ನಲ್ಲಿ ಸ್ಕಿಲ್ ಇಂಡಿಯಾ ಯೋಜನೆಗೆ .8 ಸಾವಿರ ಕೋಟಿ ಮೀಸಲಿಡಲಾಗಿದೆ. ‘ಇಂಡಸ್ಟ್ರಿ ರೆಡಿ ಫ್ಯೂಚರ್ ರೆಡಿ ಸ್ಕಿಲ್ಸ್’ ಘೋಷಣೆಯಡಿ ಯುವಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದ 18-20 ಲಕ್ಷ ಯುವಕರು ಹೈಟೆಕ್ ಸೇರಿದಂತೆ ಕೌಶಲ್ಯವನ್ನು ಪಡೆಯಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆಯದಾದ ಟೆಕ್ ಕೌಶಲ್ಯ ಕೇಂದ್ರಗಳು ತೆರೆಯಲಿವೆ. ಇದರ ರೂಪುರೇಷೆ ಅಂತಿಮವಾದ ಬಳಿಕ ಶೀಘ್ರವೇ ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಐಟಿ ಆಕ್ಟ್‌ಗೆ ಪರ್ಯಾಯವಾಗಿ ಡಿಜಿಟಲ್ ಇಂಡಿಯಾ ಬಿಲ್: ರಾಜೀವ್ ಚಂದ್ರಶೇಖರ್
ತಂತ್ರಜ್ಞಾನ ಆವಿಷ್ಕಾರ ಕೇವಲ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಗುರುಗ್ರಾಮಗಳಂಥ ಬೃಹತ್ ನಗರಗಳಿಗೆ ಸೀಮಿತವಾಗಿಲ್ಲ. ದೇಶದ ಎಲ್ಲ ಕಡೆಗಳಲ್ಲಿಯೂ ಸ್ಟಾರ್ಟ್‌ಅಪ್‌ಗಳು ಆರಂಭವಾಗುತ್ತಿವೆ. ಎರಡು ಅಥವಾ ಮೂರನೇ ಹಂತದ ನಗರ ಎಂಬ ವರ್ಗೀಕರಣ, ಪ್ರಾದೇಶಿಕತೆಯನ್ನು ಮೀರಿ ತಂತ್ರಜ್ಞಾನಿಗಳು ಬೆಳೆಯುತ್ತಿದ್ದಾರೆ. ಈ ಡಿಜಿಟಲ್ ಆರ್ಥಿಕತೆಗೆ ಅಗತ್ಯ ಪ್ರೋತ್ಸಾಹವನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರು ಒದಗಿಸುತ್ತಿದ್ದಾರೆ ಎಂದರು.
ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಕೌಶಲ್ಯಾಭಿವೃದ್ಧಿ ಕೇಂದ್ರ, ಇಂಡಿಯಾ ಎಐ ಡೇಟಾಸೈನ್ಸ್ ಯೋಜನೆಯ ಮೂಲಕ ಭವಿಷ್ಯದ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ. ಒಟ್ಟಾರೆ, ಭಾರತ ಈಗ ಕೇವಲ ತಂತ್ರಜ್ಞಾನ ಸಂಶೋಧನೆ, ಅಭಿವೃದ್ಧಿ ಅಥವಾ ವಿನ್ಯಾಸ ರೂಪಿಸುವ ದೇಶವಾಗಿ ಉಳಿದಿಲ್ಲ. ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೂ ಒತ್ತು ನೀಡಲಾಗಿದೆ. ಡೀಪ್‌ಟೆಕ್ ಮತ್ತು ಎಲೆಕ್ಟ್ರಾನಿಕ್ಸ್ ಸೆಮಿ ಕಂಡಕ್ಟರ್ ಕ್ಷೇತ್ರಗಳತ್ತ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬಳಿಕ ಸಚಿವರು ಶೃಂಗಸಭೆಯಲ್ಲಿ ನವೋದ್ಯಮಿಗಳ ಉತ್ಪಾದನಾ ಮಳಿಗೆಗಳನ್ನು ಸಂದರ್ಶಿಸಿ ವಿವರ ಪಡೆದು ಸೂಕ್ತ ಸಲಹೆ ನೀಡಿದರು. ಆರೋಗ್ಯ, ಸೆಮಿ ಕಂಡಕ್ಟರ್ ಕ್ಷೇತ್ರಗಳ ನವೋದ್ಯಮಗಳ ಪ್ರತಿನಿಧಿಗಳು ತಮ್ಮ ಉತ್ಪಾದನೆಯ ವೈಶಿಷ್ಟ್ಯತೆಯನ್ನು ಮಂಡಿಸಿದರು. ಫಿಲಿಫ್ಸ್‌ನ ಕಲಾ ಅವರು ಡಿಜಿಟಲ್ ಮೆಡಿಕಲ್ ತಂತ್ರಜ್ಞಾನದ ಬಗ್ಗೆ ವಿಷಯ ಮಂಡನೆ ಮಾಡಿದರು. ಗ್ಲೋಬಲ್ ಫೌಂಡ್ರೀಸ್‌ನ ಜಿತೇಂದ್ರ ಛಡ್ಡಾ ಅವರು ಸೆಮಿಕಂಡಕ್ಟರ್ ಕ್ಷೇತ್ರದ ಸವಾಲುಗಳನ್ನು ಪ್ರಸ್ತಾಪಿಸಿದರು.
ಸ್ಟಾರ್ಟ್ ಅಪ್ ವಿಫಲವಾದರೆ ಆತಂಕ ಬೇಡ: ಸ್ಟಾರ್ಟ್‌ಅಪ್‌ಗಳು ಸೋತರೆ ನವೋದ್ಯಮಿಗಳು ಆತಂಕಪಡಬೇಕಿಲ್ಲ. ಇದು ನೀಡುವ ಅನುಭವ ಪಿಎಚ್‌ಡಿ ಪದವಿ ಪಡೆಯುವುದಕ್ಕಿಂತ ಹೆಚ್ಚು ಜ್ಞಾನವನ್ನು ನೀಡುತ್ತದೆ. ಸ್ವತಃ ನಾನು ಕೂಡ ಈ ಸಮಸ್ಯೆಯನ್ನು ಎದುರಿಸಿದ್ದೇನೆ. ಯಾಕಾಗಿ ವಿಫಲವಾಯಿತು? ತಂತ್ರಜ್ಞಾನ ಜನರನ್ನು ಯಾಕೆ ಬೆಸೆಯಲಿಲ್ಲ? ಮಾರುಕಟ್ಟೆಯಲ್ಲಿ ಅರ್ಥೈಸಿಕೊಳ್ಳಬೇಕಾದ ಅಂಶಗಳೇನು? ಎಂಬುದನ್ನು ತಿಳಿಯಲು ಸಹಾಯಕ ಎಂದರು.
ರಸ್ತೆ ಅಪಘಾತ ವೇಳೆ ಗಾಯಾಳುಗಳ ಚಿಕಿತ್ಸೆಗೆ ತರಬೇತಿ: ಏನಿದು ರಾಸ್ತ ಟ್ರೈನಿಂಗ್?
ಡಿಜಿಟಲ್ ಇಂಡಿಯಾ ಆ್ಯಕ್ಟ್ನನಲ್ಲಿ 10 ಅಂಶ: ಬಳಿಕ ನಡೆದ ಡಿಜಿಟಲ್ ಇಂಡಿಯಾ ಆ್ಯಕ್ಟ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಭಾರತದಲ್ಲಿ 85 ಕೋಟಿ ಭಾರತೀಯರು ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಅದರಂತೆ ಸೈಬರ್ ಅಪರಾಧಗಳು ತೀವ್ರವಾಗಿ ಹೆಚ್ಚಳವಾಗಿವೆ. ಇದರಿಂದ ಬಳಕೆದಾರರು ಆರ್ಥಿಕ ನಷ್ಟಸೇರಿ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ನೂತನ ಡಿಜಿಟಲ್ ಕಾನೂನು ಮಾರುಕಟ್ಟೆಪರಿಸ್ಥಿತಿಗೆ ತಕ್ಕನಾಗಿ ಇರಲಿದೆ. ಹಣ ವರ್ಗಾವಣೆ, ವೈಯಕ್ತಿಕ ರಕ್ಷಣೆ, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ಭದ್ರತೆ, ಅಪರಾಧ ತಡೆ ಸೇರಿ ಹತ್ತು ಅಂಶಗಳನ್ನು ಡಿಜಿಟಲ್ ಇಂಡಿಯಾ ಆ್ಯಕ್ಟ್ ಒಳಗೊಂಡಿರಲಿದೆ. ಸುರಕ್ಷತೆ ಹಾಗೂ ನಂಬಿಕೆಗೆ ಅರ್ಹವಾದ ವಿಚಾರಗಳನ್ನು ಡಿಜಿಟಲ್ ಇಂಡಿಯಾ ಆ್ಯಕ್ಟ್ನಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.